ಪ್ರೇಮ್​ಗೆ ಜತೆಯಾದ ಮಾನ್ವಿತಾ; ಹೆಸರಿಡದ ಚಿತ್ರದಲ್ಲಿ ಜತೆಯಾಗಿ ನಟನೆ

Prem - Manvitha Kamath 2 New
Published on

ಬೆಂಗಳೂರು: ತಬಲಾ ನಾಣಿ ಮತ್ತು ಸ್ನಢಹಿತರು ಮೊದಲ ಬಾರಿಗೆ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ 'ನೆನಪಿರಲಿ' ಪ್ರೇಮ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಆ ಚಿತ್ರಕ್ಕೆ 'ಟಗರು' ಖ್ಯಾತಿಯ ಮಾನ್ವಿತಾ ಕಾಮತ್​ ಎಂಟ್ರಿಯಾಗಿದೆ.

ಮಾನ್ವಿತಾ ಕಳೆದ ಎರಡ್ಮೂರು ವರ್ಷಗಳಿಂದ ಕಾರಣಾಂತರಗಳಿಂದ ಯಾವುದೇ ಹೊಸ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಇನ್ನು, ಕಳೆದ ವರ್ಷ ಬಿಡುಗಡೆಯಾದ 'ಶಿವ 143' ಹೊರತುಪಡಿಸಿದರೆ, ಮಾನ್ವಿತಾ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಮಾನ್ವಿತಾ, ಕೊನೆಗೂ ಕ್ಯಾಮೆರಾ ಮುಂದೆ ಬಂದು ನಿಂತಿದ್ದಾರೆ. ಚಿತ್ರದಲ್ಲಿ ಪ್ರೇಮ್​ಗೆ ಜೋಡಿಯಾಗಿ ಮಾನ್ವಿತಾ ಕಾಮತ್​ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಮಾನ್ವಿತಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಕೆ.ಆರ್​​.ಎಸ್. ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅಥರ್ವ ಆರ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಥರ್ವ ಈ ಹಿಂದೆ ‘ಜೂಟಾಟ’ ಮತ್ತು ‘ಗುಬ್ಬಚ್ಚಿ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು, ಇದವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೆಯ ಸಿನಿಮಾ ಇದಾಗಿದೆ.

ತಂದೆಯ ಮಹತ್ವ ಸಾರುವ ಸಿನಿಮಾ ಈ ಚಿತ್ರದಲ್ಲಿ ಕುಟುಂಬ ಅಥವಾ ಸಮಾಜದಲ್ಲಿ ತಂದೆಯನ್ನು ಕಡೆಗಣಿಸಿದಾಗ, ಆತ ಯಾವ ರೀತಿ ನೋವು ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ. ತಂದೆಯ ಪಾತ್ರದಲ್ಲಿ ತಬಲ ನಾಣಿ ಕಾಣಿಸಿಕೊಳ್ಳುತ್ತಿದ್ದು, ಸಂಜಯ್ ಹಾಗೂ ಜೀವಿತ ವಸಿಷ್ಠ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ವಿಜಯ್ ಚೆಂಡೂರ್, ಅರುಣಾ ಬಾಲರಾಜ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಾಗಾರ್ಜುನ ಆರ್​.ಡಿ ಅವರ ಛಾಯಾಗ್ರಹಣ, ಆಕಾಶ್​ ಪರ್ವ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net