

90ರ ದಶಕದಲ್ಲಿ ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿ ಎಂದರೆ ಅದು ಮಹಿಮಾ ಚೌಧರಿ. ಶಾರೂಖ್ ಖಾನ್ ಅಭಿನಯದ ಪರದೇಸ್ ಚಿತ್ರದಲ್ಲಿ ಮಿಂಚಿದ ಅವರು, ದಾಗ್ - ದಿ ಫೈರ್ ಮುಂತಾದ ಚಿತ್ರಗಳಲ್ಲೂ ನಟಿಸಿದ್ದರು. ಜ್ಯೂನಿಯರ್ ಮಾಧುರಿ ದೀಕ್ಷಿತ್ ಎಂದೇ ಜನಪ್ರಿಯರಾಗಿದ್ದ ಮಹಿಮಾ ಚೌಧರಿ ಅದೊಂದು ದಿನ ಚಿತ್ರೀಕರಣಕ್ಕೆ ಹೋಗುವಾಗ ಆ್ಯಕ್ಸಿಡೆಂಟ್ಗೆ ತುತ್ತಾದರು. ಆಮೇಲೇನಾಯಿತೋ ಗೊತ್ತಿಲ್ಲ. ಅವರು ಕ್ರಮೇಣ ಚಿತ್ರರಂಗದಿಂದ ಮಾಯವಾದರು.
ಇದನ್ನೂ ಓದಿ: 15 ವರ್ಷಗಳ ನಂತರ ರಾಜಮೌಳಿ ಚಿತ್ರದಲ್ಲಿ ಶ್ರೀಯಾ!
ಇಷ್ಟಕ್ಕೂ ಮಹಿಮಾ ಚೌಧರಿಗೆ ಅಂದು ಏನಾಗಿತ್ತು? ಈಗ ಹಲವು ವರ್ಷಗಳ ನಂತರ ಅವರು ಕೊನೆಗೂ ಬಾಯಿ ಬಿಟ್ಟಿದ್ದಾರೆ. ಅಂದು ಏನಾಯಿತು? ಅದರ ನಂತರ ಏನೆಲ್ಲಾ ಅನುಭವಿಸಬೇಕಾಯಿತು? ಎಂದು ಸಂದರ್ಶನವೊಂದರಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.
ಅಜಯ್ ದೇವಗನ್ ಅಭಿನಯದ ದಿಲ್ ಕ್ಯಾ ಕರೇ ಚಿತ್ರದಲ್ಲಿ ನಟಿಸುತ್ತಿದ್ದೆ. ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಒಂದು ದಿನ ಸ್ಟುಡಿಯೋಗೆ ಹೋಗುವಾಗ, ಒಂದು ಕೆಟ್ಟ ಆ್ಯಕ್ಸಿಡೆಂಟ್ ಆಯಿತು. ಒಂದು ಟ್ರಕ್, ನಮ್ಮ ಕಾರನ್ನು ನುಜ್ಜುಗುಜ್ಜು ಮಾಡಿತು. ಕಾರಿನ ಗ್ಲಾಸು ಪುಡಿಪುಡಿಯಾಗಿ ನನ್ನ ಮುಖಕ್ಕೆ ಹಾರಿತ್ತು. ನಾನು ಸತ್ತೇ ಹೋದೆ ಎಂದುಕೊಂಡೆ. ಆ ನಂತರ ಎಷ್ಟೋ ಹೊತ್ತಿನ ನಂತರ ಆಸ್ಪತ್ರೆಗೆ ನನ್ನನ್ನು ಸೇರಿಸಲಾಯಿತು. ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡಾಗ, ನಿಜಕ್ಕೂ ಭಯವಾಯ್ತು. ನನ್ನ ಮುಖಕ್ಕೆ ಸರ್ಜರಿ ಮಾಡಿದ್ದರು. ಏಕೆಂದರೆ, 67 ಗ್ಲಾಸ್ ಪೀಸ್ಗಳು ಸಿಕ್ಕಿಹಾಕಿಕೊಂಡಿದ್ದವು. ಅದನ್ನು ತೆಗೆಯಬೇಕಿದ್ದರೆ, ಸರ್ಜರಿ ಅನಿವಾರ್ಯವಾಗಿತ್ತು. ಆ ನಂತರ ನನ್ನ ಮುಖದ ರೂಪವೇ ಬದಲಾಗಿ ಹೋಯಿತು ಎಂದು ನೆನಪಿಸಿಕೊಂಡಿದ್ದಾರೆ ಮಹಿಮಾ.
ಈ ಅಪಘಾತದ ನಂತರ ಮಹಿಮಾ, ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಕ್ರಮೇಣ ನಾನೆಲ್ಲಿ ಹೋದೆ ಎಂದು ಜನ ಮಾತಾಡಿಕೊಳ್ಳತೊಡಗಿದರು. ನಾನು ಬಚ್ಚಿಟ್ಟುಕೊಂಡಿದ್ದೆ. ಕ್ರಮೇಣ ನನ್ನ ಮನೆಯವರ ಸಹಕಾರ ಮತ್ತು ಪ್ರೋತ್ಸಾಹಗಳಿಂದ ಹೊರ ಬಂದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆ್ಯಕ್ಸಿಡೆಂಟ್ ನಂತರ ಮಹಿಮಾ ಹಲವು ಚಿತ್ರಗಳಲ್ಲಿ ನಟಿಸಿದರಾದರೂ, ಆಕೆ ಮೊದಲಿನಿಂತೆ ಆಗಲು ಸಾಧ್ಯವಾಗಲೇ ಇಲ್ಲ.