ಕೊನೆಗೂ ಗೊತ್ತಾಯ್ತು ಮಾಧುರಿ ದೀಕ್ಷಿತ್ ಸಕ್ಸಸ್ ಮಂತ್ರ!

Madhuri - Sudhir Final
Published on

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ಯಶಸ್ಸಿನ ಗುಟ್ಟೇನು? ಅವರ ನೃತ್ಯವಿರಬಹುದಾ, ಚೆಲುವಿರಬಹುದಾ, ನಗುವಿರಬಹುದಾ ಅಥವಾ ಬೇರೆ ಏನಾದರೂ ಕಾರಣವಿರಬಹುದಾ ಎಂದು ಕಾಲದಿಂದ ಕಾಲಕ್ಕೆ ಅಧ್ಯಯನ ನಡೆಯುತ್ತಲೇ ಇರುತ್ತದೆ. ಈಗ ಕೊನೆಗೂ ಗೀತರಚನೆಕಾರ ಮತ್ತು ನಿರ್ದೇಶಕ ಸುಧೀರ್ ಅತ್ತಾವರ್ ಆ ಕಾರಣವನ್ನು ಹುಡುಕಿ ತೆಗೆದಿರುವುದಷ್ಟೇ ಅಲ್ಲ, ಮಾಧುರಿ ಅವರಿಂದಲೇ ಹೇಳಿಸಿದ್ದಾರೆ.

ನಿರ್ದೇಶಕ ಮತ್ತು ನಾಟಕಕಾರ ಸುಧೀರ್ ಅತ್ತಾವರ್​, ಯೂಟ್ಯೂಬ್‌ನಲ್ಲಿ ಸಕ್ಸಸ್ ಫಿಲಂಸ್ ಎಂಬ ಚಾನಲ್ ಪ್ರಾರಂಭಿಸಿದ್ದಾರೆ. ಅದರಡಿ ‘ಸಕ್ಸಸ್ ಮಂತ್ರ’ ಎಂಬ ಹೊಸ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಯಶಸ್ಸಿನ ಗುಟ್ಟೇನು ಎಂದು ಈ ಕಾರ್ಯಕ್ರಮದಲ್ಲಿ ಅವರು ಹೇಳುವುದಕ್ಕೆ ಹೊರಟಿದ್ದಾರೆ. ಈ ಕಾರ್ಯಕ್ರಮದ ಮೊದಲ ಹಂತವಾಗಿ ಮಾಧುರಿ ದೀಕ್ಷಿತ್ ಅವರ ಯಶಸ್ಸಿನ ಮತ್ತು ಸಾಧನೆಯ ದಾರಿಯನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದಾರೆ.

ಈ ಕುರಿತು ಮಾತನಾಡುವ ಅವರು, ‘ಇವತ್ತೂ ಬಾಲಿವುಡ್‌ನಲ್ಲಿ ಅದೆಷ್ಟು ಜನಪ್ರಿಯ ವ್ಯಕ್ತಿಗಳಿದ್ದಾರೋ, ಅವರೆಲ್ಲರೂ ಸಾಕಷ್ಟು ಹೋರಾಟ ಮಾಡಿಯೇ ಈ ಹಂತಕ್ಕೆ ಬಂದಿದ್ದಾರೆ. ಮಾಧುರಿ ದೀಕ್ಷಿತ್ ಒಂದು ದೊಡ್ಡ ಯಶಸ್ಸು ನೋಡುವುದಕ್ಕೆ ಮುನ್ನ ಆರು ಫ್ಲಾಪ್ ಚಿತ್ರಗಳಲ್ಲಿ ನಟಿಸಿದ್ದರು. ಕೈಲಾಶ್ ಖೇರ್ ರೈಲಿನಲ್ಲಿ ಹಾಡುತ್ತಿದ್ದರಂತೆ. ಗೋವಿಂದಾ ಹೀರೋ ಮೆಟೀರಿಯಲ್ ಅಲ್ಲ ಅಂತ ಅವರಿಗೆ ಅವಕಾಶ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದರಂತೆ. ಹೀಗೆ ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಆದರೂ ಅವರು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ, ಅದಕ್ಕೆ ಕಾರಣ ಅವರ ಪರಿಶ್ರಮ ಮಾತ್ರ. ನನ್ನ ಪ್ರಕಾರ, ಪ್ರತಿಯೊಬ್ಬರ ಸಕ್ಸಸ್ ಮಂತ್ರವೂ ಪರಿಶ್ರಮವೇ ಆಗಿರುತ್ತದೆ. ಯಾಕೆ ಈ ಕುರಿತು ಒಂದು ಕಾರ್ಯಕ್ರಮ ಮಾಡಬಾರದು ಎಂದು ಯೋಚಿಸಿದಾಗ, ಹುಟ್ಟಿಕೊಂಡಿದ್ದೇ ಈ ‘ಸಕ್ಸಸ್ ಮಂತ್ರ’ ಎಂಬ ಕಾರ್ಯಕ್ರಮ’ ಎನ್ನುತ್ತಾರೆ ಸುಧೀರ್.

ಬರೀ ಮಾಧುರಿ ದೀಕ್ಷಿತ್ ಅಷ್ಟೇ ಅಲ್ಲ, ಧರ್ಮೇಂದ್ರ, ಗೋವಿಂದ, ಬಪ್ಪಿ ಲಹರಿ, ಪ್ಯಾರೇಲಾಲ್ (ಲಕ್ಷ್ಮೀಕಾಂತ್-ಪ್ಯಾರೇಲಾಲ್ ಖ್ಯಾತಿಯ), ಅಶಾ ಭೋಂಸ್ಲೇ, ಉಷಾ ಮಂಗೇಶ್ಕರ್, ಎಂ.ಎಸ್. ಸತ್ಯು, ಗಾಯಕಿ ಹೇಮಲತಾ, ಶ್ಯಾರೋನ್​ ಪ್ರಭಾಕರ್​, ಆರತಿ ಮುಖರ್ಜಿ ಸೇರಿದಂತೆ 45ಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ಈ ಸಂಬಂಧ ಸಂದರ್ಶನ ಮಾಡಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಾದ ನೋವು-ನಲಿವುಗಳನ್ನು ಈ ಕಾರ್ಯಕ್ರಮದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಮಾಧುರಿ ದೀಕ್ಷಿತ್ ಅವರ ಎಪಿಸೋಡ್ ಮಾತ್ರ ಅಪ್‌ಲೋಡ್ ಆಗಿದೆ. ಬೇರೆ ಸೆಲೆಬ್ರಿಟಿಗಳ ಕಂತುಗಳು ಈಗಾಗಲೇ ಎಡಿಟ್ ಆಗಿದ್ದು, ಸದ್ಯದಲ್ಲೇ ಇನ್ನಷ್ಟು ಕಂತುಗಳು ಅಪ್‌ಲೋಡ್ ಆಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net