

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಚಿತ್ರದಲ್ಲಿ ಚಂದ್ರಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಾಧುರಿ ದೀಕ್ಷಿತ್. ಚಿತ್ರ ಸೂಪರ್ಹಿಟ್ ಆಗಿತ್ತು. ಆ ನಂತರ ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಮಾತುಗಳು ಆಗಾಗ ಕೇಳಿಬರುತ್ತಿತ್ತಾದರೂ, ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.
ಈಗ 19 ವರ್ಷಗಳ ನಂತರ ಬನ್ಸಾಲಿ ಮತ್ತು ಮಾಧುರಿ ದೀಕ್ಷಿತ್ ಒಟ್ಟಿಗೆ ಕೆಲಸ ಮಾಡುವ ಮುಹೂರ್ತ ಬಂದಿದೆ. ಸದ್ಯ, ಗಂಗೂಬಾಯಿ ಕತಿಯಾವಾಡಿ ಚಿತ್ರವನ್ನು ನಿರ್ದೇಶಿಸುತ್ತಿರುವ ಬನ್ಸಾಲಿ, ಅದನ್ನು ಇದೇ ವರ್ಷ ಬಿಡುಗಡೆ ಮಾಡುವ ಬಗ್ಗೆ ಯೋಚನೆ ಮಾಡಿದ್ದಾರೆ. ಈ ಮಧ್ಯೆ, ಅವರು ಹೀರಾ ಮಂಡಿ ಎಂಬ ಇನ್ನೊಂದು ಕಥೆಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ನಟಿಸುವಂತೆ ಅವರು ಮಾಧುರಿ ದೀಕ್ಷಿತ್ ಅವರನ್ನು ಕೇಳಿದ್ದಾರಂತೆ.
ಲಾಕ್ಡೌನ್ನಲ್ಲಿ ಹೀರಾ ಮಂಡಿ ಚಿತ್ರದ ಸ್ಕ್ರಿಪ್ಟ್ ಕೈಗೆತ್ತಿಕೊಂಡಿದ್ದ ಬನ್ಸಾಲಿ, ಈಗಾಗಲೇ ಅದನ್ನು ಬಹುತೇಕ ಫೈನಲ್ ಮಾಡಿದ್ದಾರೆ. ಈಗಾಗಲೇ ಅವರು ಸೋನಾಕ್ಷಿ ಸಿನ್ಹಾ ಮತ್ತು ಹ್ಯೂಮಾ ಖುರೇಶಿ ಅವರನ್ನು ಪ್ರಮುಖ ಪಾತ್ರಗಳಿಗೆ ಫೈನಲ್ ಮಾಡಿದ್ದಾರೆ. ಚಿತ್ರದಲ್ಲಿ ಒಂದು ಮುಜ್ರ ಹಾಡಿದ್ದು, ಅದರಲ್ಲಿ ಮಾಧುರಿ ಅವರೇ ಕಾಣಿಸಿಕೊಂಡರೆ ಚೆನ್ನ ಎಂಬ ನಿರ್ಧಾರಕ್ಕೆ ಬನ್ಸಾಲಿ ಬಂದಿದ್ದಾರೆನ್ನಲಾಗಿದೆ.
ಈ ವಿಷಯವನ್ನು ಅವರು ಮಾಧುರಿ ಅವರಿಗೂ ತಿಳಿಸಿದ್ದು, ಮಾಧುರಿ ಸಹ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ವೈಭವಯುತ ಸೆಟ್ನಲ್ಲಿ ಈ ಮುಜ್ರ ಹಾಡಿನ ಚಿತ್ರೀಕರಣ ಆಗಲಿದೆಯಂತೆ.