

ಕೆಲವರು ತಮಗಾದ ನೋವು ಮತ್ತು ಅವಮಾನವನ್ನು ಎಂದೂ ಮರೆಯುವುದಿಲ್ಲ. ಅದನ್ನು ಸದಾ ನೆನಪಿಟ್ಟುಕೊಂಡಿರುತ್ತಾರೆ ಮತ್ತು ಅದರಿಂದ ತಾವು ಜೀವನದಲ್ಲಿ ದೊಡ್ಡ ಪಾಠವೊಂದು ಕಲಿತಿರುತ್ತಾರೆ. ಅಂಥದ್ದೇ ಒಂದು ಅವಮಾನವನ್ನು ಎದುರಿಸಿರುವ ಮಾಧವನ್, ಅದರಿಂದ ಸಾಕಷ್ಟು ಪಾಠವನ್ನೂ ಕಲಿತಿದ್ದಾರಂತೆ.
ಇಷ್ಟಕ್ಕೂ ಮಾಧವನ್ಗೆ ಯಾರು ಮತ್ತು ಯಾಕೆ ಅವಮಾನ ಮಾಡಿದರು ಎಂಬ ಪ್ರಶ್ನೆ ಸಹಜ. ಈ ಘಟನೆಯಾಗಿದ್ದು ಹಲವು ವರ್ಷಗಳ ಹಿಂದೆ. ಮಾಧವನ್ ಎಂಟು ವರ್ಷದವರಾಗಿದ್ದಾಗ ಆದ ಅವಮಾನವನ್ನು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಅವರಿಗೆ ಅವಮಾನ ಮಾಡಿದವರ್ಯಾರು ಎಂಬ ವಿಷಯವನ್ನು ಮಾತ್ರ ಎಲ್ಲೂ ಬಹಿರಂಗಪಡಿಸಿಲ್ಲ.
'ಆಗ ನಾನು ಎಂಟು ವರ್ಷದವನಾಗಿದ್ದೆ. ಒಮ್ಮೆ ದೊಡ್ಡ ಕ್ರಿಕೆಟರ್ ಒಬ್ಬರನ್ನು ಭೇಟಿ ಮಾಡುವ ಸಂದರ್ಭ ಬಂತು. ನಾವು ಸ್ನೇಹಿತರೆಲ್ಲಾ ಅವರಿಂದ ಆಟೋಗ್ರಾಫ್ ಪಡೆಯುವುದಕ್ಕೆ ಹೋದೆವು. ನಾವು ಹುಡುಗರು ಹೋದ ಸಂದರ್ಭದಲ್ಲಿ, ಅವರು ಯಾರ ಜತೆಗೋ ಮಾತಾಡುತ್ತಾ ಕುಳಿತಿದ್ದರು. ನಾವು ಹೋಗಿದ್ದು ನೋಡಿ, ಆಟೋಗ್ರಾಫ್ ಸೈನ್ ಮಾಡುವುದಕ್ಕೆ ಪ್ರಾರಂಭಿಸಿದರು. ನಾನಂತೂ ತುಂಬಾ ಎಕ್ಸೈಟ್ ಆಗಿದ್ದೆ. ನನ್ನ ಸರದಿ ಬಂದಾಗ, ಅವರಿಗೆ ಆಟೋಗ್ರಾಫ್ ಬುಕ್ ಕೊಟ್ಟೆ. ಯಾರು ಕೊಟ್ಟರು ಎಂಬುದನ್ನೂ ಸಹ ನೋಡದೆ, ಅವರು ಸುಮ್ಮನೆ ಸೈನ್ ಮಾಡಿ ವಾಪಸ್ಸು ಕೊಟ್ಟರು' ಎಂದು ಹೇಳಿಕೊಂಡಿದ್ದಾರೆ ಮಾಧವನ್.
'ಅವರು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ, ಅವರ ನಡೆಯಿಂದ ನನಗೆ ಬಹಳ ನೋವಾಯಿತು. ಆವತ್ತೇ ತೀರ್ಮಾನಿಸಿದೆ. ನಾನು ಯಾವತ್ತಾದರೂ ಯಾರಿಗಾದರೂ ಆಟೋಗ್ರಾಫ್ ಕೊಟ್ಟರೆ, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇನೆ ಎಂದು ನಿರ್ಧರಿಸಿದೆ' ಎಂದಿದ್ದಾರೆ ಮಾಧವನ್. ಅಷ್ಟೇ ಅಲ್ಲ, ಅದನ್ನು ಪಾಲಿಸಿಕೊಂಡು ಬಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮಾಧವನ್, ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದರು. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ, ಅವರು ತಮ್ಮ ಪೋಸ್ಟ್ ಮೂಲಕ ಹುರಿದುಂಬಿಸಿದ್ದರು.
'ಬೋರ್ಡ್ ಎಕ್ಸಾಮ್ಗಳಲ್ಲಿ ನನಗೆ ಬಂದ ಅಂಕಗಳೆಷ್ಟು ಗೊತ್ತಾ? ಕೇವಲ 58 ಪರ್ಸೆಂಟ್. ಅದರಿಂದ ಧೈರ್ಯಗೆಡಬಾರದು. ಸಾಧಿಸುವುದು ಇನ್ನೂ ಸಾಕಷ್ಟು ಇದೆ. ನಿವಾದ ಆಟ ಆಗಿನ್ನೂ ಪ್ರಾರಂಭವೇ ಆಗಿರುವುದಿಲ್ಲ ಸ್ನೇಹಿತರೇ' ಎಂದು ಅವರು ಬರೆದುಕೊಂಡಿದ್ದರು.