

ಪಣಜಿ: ಬುಧವಾರವಷ್ಟೇ ಕನ್ನಡದ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ, ಕೋವಿಡ್ಗೆ ಬಲಿಯಾಗಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಕೆಲವರು ಸುದ್ದಿ ಕೇಳಿ ರೆಸ್ಟ್ ಇನ್ ಪೀಸ್ ಅಂತಲೂ ಹೇಳಿದ್ದರು. ಕೊನೆಗೆ ದೊಡ್ಡಣ್ಣ ಅವರೇ ವೀಡಿಯೋ ಮೂಲಕ ತಾವು ಮನೆಯಲ್ಲಿ ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಇರುವುದಾಗಿ ಹೇಳಿದ್ದರು.
ಇದೀಗ ಅಂಥದ್ದೇ ಒಂದು ಘಟನೆ ಬಾಲಿವುಡ್ ಗಾಯಕ ಲಕ್ಕಿ ಅಲಿ ಅವರ ಜೀವನದಲ್ಲೂ ಆಗಿದೆ. ಲಕ್ಕಿ ಅಲಿಗೆ ಅವರಿಗೆ ಕರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ಕಳೆದ ವಾರ ಕೇಳಿ ಬಂದಿತ್ತು. ಇದೀಗ ನೋಡಿದರೆ, ಅವರು ನಿಧನರಾಗಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಯಾವಾಗ ಲಕ್ಕಿ ಅಲಿ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತೋ, ಆಗ ನಫಿಸಾ ಅಲಿ ಸೇರಿದಂತೆ ಲಕ್ಕಿ ಅವರ ಹಲವು ಗೆಳೆಯರು ಸೋಷಿಯಲ್ ಮೀಡಿಯಾದಲ್ಲಿ ಇದು ಸುಳ್ಳು ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಲಕ್ಕಿ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಹೊಸ ಚಿತ್ರದಲ್ಲಿ ಭಾಯ್ಜಾನ್ ಆದ ಸಲ್ಮಾನ್ ಖಾನ್ …
ಆದರೆ, ಯಾವಾಗ ಸುದ್ದಿ ಇನ್ನಷ್ಟು ಹರಡಿತೋ, ಆಗ ಸ್ವತಃ ಲಕ್ಕಿ ಅಲಿ ಇನ್ಸ್ಟಾಗ್ರಾಂನಲ್ಲಿ ತಾವು ಆರೋಗ್ಯವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ಎಲ್ಲರೂ ರೆಸ್ಟ್ ಇನ್ ಪೀಸ್ ಎಂಬ ಸಂದೇಶ ಕಳಿಸುತ್ತಿದ್ದಾರೆ. ನಾನು ರೆಸ್ಟ್ ಅಲ್ಲ ರೆಸ್ಟಿಂಗ್ ಇನ್ ಪೀಸ್. ಮನೆಯಲ್ಲಿ ಆರಾಮವಾಗಿದ್ದೇನೆ. ನನ್ನ ಆರೋಗ್ಯಕ್ಕೇನೂ ಆಗಿಲ್ಲ. ಹುಷಾರಾಗಿರುವುದಷ್ಟೇ ಅಲ್ಲ, ಸುರಕ್ಷಿತವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಹುಷಾರಾಗಿರಿ ಎಂದು ಮನವಿ ಮಾಡಿದ್ದಾರೆ.