

ಬೆಂಗಳೂರು: ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರ ಅನೇಕ ಕಥೆ-ಕಾದಂಬರಿಗಳು ಈಗಾಗಲೇ ಚಿತ್ರಗಳಾಗಿವೆ. ಇದೀಗ ‘ಉಡ’ ಎಂಬ ಕೃತಿಯೂ ‘ಮಾನ’ ಹೆಸರಿನ ಚಿತ್ರವಾಗಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ಚಿತ್ರೀಕರಣವನ್ನೂ ಮುಗಿಸಿದೆ.
ಹಾಗಾದರೆ, ಏನಿದು ‘ಮಾನ’? ಜೀತಪದ್ಧತಿಯಂಥ ಸಾಮಾಜಿಕ ಪಿಡುಗಿನ ಬಗ್ಗೆ ಈ ಚಿತ್ರ ಮಾತನಾಡಲಿದೆ. ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ನಾಯಕನಾಗಿ ನಟಿಸಿದರೆ, ನಟಿ ಉಮಾಶ್ರೀ ಪ್ರಮುಖ ಪಾತ್ರವೊಂದರಲ್ಲಿದ್ದಾರೆ. ಮಂಡ್ಯ, ಮದ್ದೂರು ಸುತ್ತಲಿನ ಗ್ರಾಮೀಣ ಭಾಗದಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆದಿದೆ. 70ರ ದಶಕದಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮೂಡಿಬಂದಿದೆ. ಕಾಂತಲಕ್ಷ್ಮೀ ಮತ್ತು ರಮೇಶ್ ಬಾಬು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.