

ಚೆನ್ನೈ: ವಿಜಯ್ ಅಭಿನಯದ 'ಲಿಯೋ' ಚಿತ್ರದ ಚಿತ್ರೀಕರಣ ಕಳೆದ ತಿಂಗಳಷ್ಟೇ ಶುರುವಾಗಿದೆ. ಅದಾಗಲೇ ಚಿತ್ರವು ಹಲವು ಮೂಲಗಳಿಂದ 400 ಕೋಟಿ ರೂ. ಬಾಚಿಕೊಂಡಿದೆ.
'ಮಾಸ್ಟರ್' ನಂತರ ವಿಜಯ್ ಅಭಿನಯದಲ್ಲಿ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ಚಿತ್ರ 'ಲಿಯೋ'. ಕಳೆದ ತಿಂಗಳಷ್ಟೇ ಈ ಚಿತ್ರ ಪ್ರಾರಂಭವಾಗಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇನ್ನು, ಬಿಜಿನೆಸ್ ವಿಷಯದಲ್ಲೂ ಈ ಚಿತ್ರ ಬಹಳ ಮುಂದಿದೆ. ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದೆ, ಆಗಲೇ ಚಿತ್ರತಂಡವು 400 ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.
'ಲಿಯೋ' ಚಿತ್ರದ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಸಂಸ್ಥೆಯು 240 ಕೋಟಿ ರೂ.ಗಳಿಗೆ ಖರೀದಿಸಿದೆಯಂತೆ. ಚಿತ್ರದ ಸ್ಯಾಟಿಲೈಟ್ ಹಕ್ಕುಗಳನ್ನು ಸನ್ ಟಿವಿಯು 70 ಕೋಟಿ ರೂ.ಗೆ ತನ್ನದಾಗಿಸಿಕೊಂಡಿದೆಯಂತೆ. ಸಂಗೀತದ ಹಕ್ಕುಗಳನ್ನು 18 ಕೋಟಿ ರೂ. ಕೊಟ್ಟು ಸೋನಿ ಮ್ಯೂಸಿಕ್ ಖರೀದಿಸಿದರೆ, ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ದೊಡ್ಡ ಪೈಪೋಟಿ ಇದೆಯಂತೆ. ಈಗಾಗಲೇ ಸಂಸ್ಥೆಯೊಂದು 30 ಕೋಟಿ ರೂ.ಗಳವರೆಗೂ ಕೊಡುವುದಕ್ಕೆ ತಯಾರಿದೆ ಎಂದು ಹೇಳಲಾಗಿದೆ.
ಇದೆಲ್ಲದರಿಂದಲೇ ನಿರ್ಮಾಪಕರಿಗೆ 240 ಕೋಟಿ ರೂ.ಗಳವರೆಗೂ ವಾಪಸ್ಸಾದರೆ, ಚಿತ್ರಮಂದಿರಗಳ ವಿತರಣಾ ಹಕ್ಕುಗಳು 175 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಓವರ್ಸೀಸ್ ಹಕ್ಕುಗಳು 50 ಕೋಟಿ ರೂ.ಗಳಿಗೆ ಮಾರಾಟವಾಗುವ ಅಂದಾಜಿದ್ದು, ಬೇರೆ ರಾಜ್ಯಗಳ ವಿತರಣೆಯ ಹಕ್ಕುಗಳು 35 ಕೋಟಿ ರೂ.ವರೆಗೂ ಮಾರಾಟವಾಗಬಹುದು ಎಂಬ ಸುದ್ದಿ ಇದೆ. ಇವೆಲ್ಲವನ್ನೂ ಸೇರಿಸಿದರೆ, ಚಿತ್ರ ಬಿಡುಗಡೆಗೂ ಮುನ್ನವೇ 400 ಕೋಟಿ ರೂ. ಸಂಪಾದಿಸಿದಂತಾಗುತ್ತದೆ.
'ಲಿಯೋ' ಚಿತ್ರದಲ್ಲಿ ವಿಜಯ್ ಜತೆಗೆ ಸಂಜಯ್ ದತ್, ತ್ರಿಷಾ, ಮಿಸ್ಕಿನ್, ಗೌತಮ್ ಮೆನನ್, ಪ್ರಿಯಾ ಆನಂದ್ ಮುಂತಾದವರು ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.