ಕೆಸಿಸಿ ಪಂದ್ಯದ ವೇಳೆ 'ಹೊಯ್ಸಳ' ಚಿತ್ರದ ಮಾಸ್​ ಹಾಡು ಬಿಡುಗಡೆ …

Hoysala 2
Published on

ಬೆಂಗಳೂರು: ಡಾಲಿ ಧನಂಜಯ ಅಭಿನಯದ 'ಹೊಯ್ಸಳ' ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೇ ಇದೆ. ಮಾರ್ಚ್​ 30ರಂದು ರಾಮನವಮಿ ಅಂಗವಾಗಿ ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ, ಶನಿವಾರ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ.

ಇದೊಂದು ಮಾಸ್​ ಹಾಡಾಗಿದ್ದು, ಸಂತೋಷ್​ ಆನಂದರಾಮ್​ ಬರೆದಿದ್ದಾರೆ. ಖ್ಯಾತ ಗಾಯಕ ನಕಾಶ್ ಅಜೀಜ್ ಹಾಡಿದ್ದಾರೆ. ಇನ್ನು, ಹಾಡಿನಲ್ಲಿ ಬರುವ Rapಗೆ ಯೋಗಿ ಬಿ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ವಿಶೇಷವೆಂದರೆ, ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ ಪಂದ್ಯದ ವೇಳೆ ಈ ಹಾಡನ್ನು ಮೊದಲು ಪ್ಲೇ ಮಾಡಲಾಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲೂ ಬಿಡುಗಡೆಯಾಗಿದ್ದು, ಎರಡೂವರೆ ಲಕ್ಷ ವೀಕ್ಷಣೆ ಪಡೆದಿದೆ.

'ಹೊಯ್ಸಳ' ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತೀಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಿದ್ದು, ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದಾರೆ. ಧನಂಜಯ್​ ಈ ಚಿತ್ರದಲ್ಲಿ ಜಯದೇವ ಹೊಯ್ಸಳ ಎಂಬ ಖಡಕ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್​ ಇದ್ದಾರೆ. ಅಚ್ಯುತ್​ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net