ಬದಲಾವಣೆಗೆ ಇದು ಒಳ್ಳೆಯ ಸಮಯ; ಅಕ್ಷಯ್​ ಕುಮಾರ್​ ಹೀಗೆ ಹೇಳಿದ್ದೇಕೆ?

Akshay Kumar (10)
Published on

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ 'ಸೆಲ್ಫೀ' ಚಿತ್ರ ಮೊನ್ನೆ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ, ಮೊದಲ ದಿನವೇ ಫ್ಲಾಪ್​ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಸೋಲಿನ ಬಗ್ಗೆ ಮೌನವಾಗಿದ್ದ ಅಕ್ಷಯ್​, ಈಗ ಮನಬಿಚ್ಚಿ ಮಾತನಾಡಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಕಡೆಯದಾಗಿ ದೊಡ್ಡ ಹಿಟ್​ ಆದ ಚಿತ್ರವೆಂದರೆ, ಅದು 'ಸೂರ್ಯವಂಶಿ'. ಕಳೆದ ವರ್ಷ ಅಕ್ಷಯ್​ ಅಭಿನಯದ 'ಸಾಮ್ರಾಟ್​ ಪೃಥ್ವಿರಾಜ್​', 'ಬಚ್ಚನ್​ ಪಾಂಡೆ', 'ರಕ್ಷಾ ಬಂಧನ್​' ಮತ್ತು 'ರಾಮ್​ ಸೇತು' ಚಿತ್ರಗಳು ಬಿಡುಗಡೆಯಾಗಿ ಸೋಲನುಭವಿಸಿದ್ದವು. ಈಗ 'ಸೆಲ್ಫೀ' ಸಹ ಸೋಲಿನ ಪಟ್ಟಿ ಸೇರಿದೆ. ಕಳೆದ ವರ್ಷ ಸೋಲುಗಳು ಎದುರಾದಾಗ ಮೌನವಾಗಿದ್ದ ಅಕ್ಷಯ್​, ಈಗ ಮೌನ ಮುರಿದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನನಗೆ ಹೀಗಾಗುತ್ತಿರುವುದು ಇದು ಮೊದಲೇನಲ್ಲ. ಒಂದು ಕಾಲಕ್ಕೆ ನನ್ನ 16 ಚಿತ್ರಗಳು ಸತತವಾಗಿ ನೆಲ ಕಚ್ಚಿದ್ದವು. ಆ ನಂತರ ಒಟ್ಟಿಗೆ ಎಂಟು ಸಿನಿಮಾಗಳು ಸತ್ತಿದ್ದವು. ಈ ಬಾರಿ, ನಾಲ್ಕೈದು ಸಿನಿಮಾಗಳು ಸೋತಿವೆ. ನನ್ನ ಚಿತ್ರ ಸೋತಿದೆ ಎಂದರೆ ದಕ್ಕೆ ನಾನೇ ಕಾರಣ. ನನ್ನ ತಪ್ಪಿನಿಂದಾಗಿ ಅದಾಗಿದೆ. ಜನ ಬದಲಾಗಿದೆ. ಜನರ ಅಭಿರುಚಿ ಬದಲಾಗಿದೆ. ನಾವು ಬದಲಾಗಬೇಕು. ಹಳೆಯದನ್ನು ಮರೆತು, ಪುನಃ ಮೊದಲಿನಿಂದ ಶುರು ಮಾಡಬೇಕು' ಎಂದು ಅವರು ಹೇಳಿಕೊಂಡಿದ್ದಾರೆ.

ಅದೊಂಥರಾ ಅಲಾರ್ಮ್​ ಇದ್ದಂತೆ ಎನ್ನುವ ಅಕ್ಷಯ್​, 'ಅದೊಂದು ಅಲಾರ್ಮ್​ ಇದ್ದಂತೆ. ನಾವು ಬದಲಾಗಬೇಕು ಎನ್ನುವುದನ್ನು ಅದು ಸೂಚಿಸುತ್ತದೆ. ನಾನು ಬದಲಾಗುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಚಿತ್ರ ಸೋತರೆ ಅದು ಪ್ರೇಕ್ಷಕರ ತಪ್ಪಲ್ಲ. ಅದು ನನ್ನ ತಪ್ಪು. ನಾವೇನು ಆಯ್ಕೆ ಮಾಡಿಕೊಂಡಿದ್ದೇವೋ ಅದರ ತಪ್ಪು. ಬಹುಶಃ ಆ ಚಿತ್ರದಲ್ಲಿ ಜನರಿಗೆ ಇಷ್ಟವಾಗುವ ಅಂಶಗಳು ಇರಲಿಲ್ಲವೇನೋ?' ಎಂದು ಅಕ್ಷಯ್​ ಹೇಳಿದ್ದಾರೆ.

'ಸೆಲ್ಫೀ' ಚಿತ್ರವು ಮೂರು ವರ್ಷಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದ 'ಡ್ರೈವಿಂಗ್ ಲೈಸೆನ್ಸ್​' ಚಿತ್ರದ ರೀಮೇಕ್​ ಆಗಿತ್ತು. ಅಕ್ಷಯ್​ ಕುಮಾರ್​ ಜತೆಗೆ ಎಮ್ರಾನ್​ ಹಶ್ಮಿ ಸಹ ನಟಿಸಿದ್ದು, ಚಿತ್ರವನ್ನು ರಾಜ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net