ಇಂದಿರಾ ಗಾಂಧಿ ಪಾತ್ರ ಮಾಡ್ತಾರಂತೆ ಲಾರಾ ... ಯಾವ ಚಿತ್ರ ಗೊತ್ತಾ?

Lara Dutta - Final
Published on

ಇತ್ತೀಚೆಗಷ್ಟೇ 'ಹಂಡ್ರೆಡ್​' ಎಂಬ್ ವೆಬ್​ ಸೀರೀಸ್​ನಲ್ಲಿ ಕಾಣಿಸಿಕೊಂಡಿದ್ದ ಲಾರಾ ದತ್ತಾ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಏನು ಗೊತ್ತಾ? ಹೊಸ ಚಿತ್ರವೊಂದರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಲಾರಾ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಇಷ್ಟಕ್ಕೂ ಲಾರಾ, ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಯಾವ ಚಿತ್ರಕ್ಕಾಗಿ ಗೊತ್ತಾ? ಅಕ್ಷಯ್​ ಕುಮಾರ್​ ಅಭಿನಯದ 'ಬೆಲ್​ ಬಾಟಮ್​' ಚಿತ್ರಕ್ಕೆ. ಇಷ್ಟರಲ್ಲಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿರಬೇಕಿತ್ತು. ಲಾಕ್​ಡೌನ್​ನಿಂದ ತಡವಾಗಿತ್ತು. ಆಗಸ್ಟ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅಕ್ಷಯ್​ ಮತ್ತು ತಂಡ ಮುಂದಿನ ತಿಂಗಳು ಆಗಸ್ಟ್​ಗೆ ಹಾರಲಿದ್ದಾರೆ.

'ಬೆಲ್​ ಬಾಟಮ್​' ಚಿತ್ರವು 80ರ ದಶಕದಲ್ಲಿ ನಡೆದ ಒಂದು ಘಟನೆಯ ಕುರಿತಾದ ಚಿತ್ರ. ಆ ಕಾಲಘಟ್ಟದಲ್ಲಿ ಇಡೀ ದೇಶವನ್ನು ಬೆಚ್ಚಿಬೀಳಿಸಿದ ಒಂದು ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಆ ಘಟನೆ ಏನು ಎಂದು ಕೇಳಬೇಡಿ. ಅದೇನೆಂದು ಗೊತ್ತಾದರೆ, ಚಿತ್ರದಲ್ಲಿ ನೋಡುವುದಕ್ಕೆ ಏನೂ ಇರುವುದಿಲ್ಲ ಎಂದು ಚಿತ್ರತಂಡ ಯಾವೊಂದು ವಿಷಯದ ಬಗ್ಗೆಯೂ ತುಟಿ ಬಿಚ್ಚುತ್ತಿಲ್ಲ.

ಈ ಚಿತ್ರದಲ್ಲಿ ಲಾರಾ ದತ್ತಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರ ಮಾಡುತ್ತಿದ್ದಾರಂತೆ. ಈ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡು ಕುಳಿತಿದ್ದಾಗ ಹೊಳೆದ ಹೆಸರು ಲಾರಾ ಅವರದ್ದು. ಈ ಹಿಂದೆ, ಅಕ್ಷಯ್​ ಮತ್ತು ಲಾರಾ, ನಾಯಕ-ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ 'ಸಿಂಗ್ ಈಸ್​ ಬ್ಲಿಂಗ್​' ಎಂಬ ಚಿತ್ರದಲ್ಲೂ ಜತೆಯಾಗಿ ನಟಿಸಿದ್ದರು.

ಈಗ ಅಕ್ಷಯ್​ ಮತ್ತು ಲಾರಾ ಮತ್ತೊಮ್ಮೆ, 'ಬೆಲ್​ ಬಾಟಮ್​'ನಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಆದರೆ, ಈ ಬಾರಿ ಅವರು ನಾಯಕ-ನಾಯಕಿಯಾಗಿರುವುದಿಲ್ಲ . ಲಾರಾ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಕ್ಷಯ್​ ಅವರು ಒಬ್ಬ ಸ್ಪೆಷಲ್​ ಏಜೆಂಟ್​ ಆಗಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net