

ಮುಂಬೈ: 'ಬಾಲಿವುಡ್ ಮಂದಿಗೆ ತನ್ನನ್ನು ಕಂಡರೆ ವಿಪರೀತ ಹೊಟ್ಟೆಕಿಚ್ಚು. ಅದೇ ಕಾರಣಕ್ಕೆ ತಮ್ಮ ಮೇಲೆ ಎಲ್ಲರೂ ಹಗೆತನ ಸಾಧಿಸುತ್ತಾರೆ' ಎಂದು ಬಾಲಿವುಡ್ನ ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕ ಕೆಆರ್ಕೆ ಹೇಳಿಕೊಂಡಿದ್ದಾರೆ.
'ಫ್ಯಾಮಿಲಿ ಮ್ಯಾನ್ 2' ಚಿತ್ರದ ವಿಮರ್ಶೆ ಮಾಡುವ ಸಂದರ್ಭದಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಕೆಆರ್ಕೆ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಮನೋಜ್ ಬಾಜ್ಪೇಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಸಂಬಂಧ ಮಾತನಾಡಿರುವ ಕೆಆರ್ಕೆ, 'ಒಬ್ಬ ಮನುಷ್ಯ ಮುಂಬೈನಿಂದ ಇಂದೋರ್ಗೆ ಹೋಗಿ, ಅಲ್ಲೊಂದು ತಾತ್ಕಾಲಿಕ ಅಡ್ರೆಸ್ ಪ್ರೂಫ್ ಪಡೆದು ನನ್ನ ಮೇಲೆ ಕೇಸ್ ದಾಖಲಿಸುತ್ತಾರೆ ಎಂದರೆ, ಅವರಿಗೆ ನನ್ನ ಬಗ್ಗೆ ಅದೆಷ್ಟು ಸಿಟ್ಟಿರಬಹುದು ಎಂದು ನೀವೇ ಊಹಿಸಿ' ಎಂದು ಕೆಆರ್ಕೆ ಟ್ವೀಟ್ ಮಾಡಿದ್ದಾರೆ.
'ಮನೋಜ್ ಬಾಜ್ಪೇಯಿ ವಿರುದ್ಧ ಕಾಮಿಡಿ ನಟ ಸುನೀಲ್ ಪಾಲ್ ಸಹ ಹಲವು ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಅದಕ್ಕೆ ಸುಮ್ಮನಿದ್ದ ಮನೋಜ್, ನನ್ನ ವಿರುದ್ಧ ಮಾತ್ರ ತಿರುಗಿ ಬಿದ್ದಿದ್ದಾರೆ. ಇದೊಂದೇ ಉದಾಹರಣೆ ಸಾಕು, ಬಾಲಿವುಡ್ ಮಂದಿಗೆ ಈ ಬ್ರಾಂಡ್ ಕೆಆರ್ಕೆ ಕಂಡರೆ ಅದೆಷ್ಟು ಹೊಟ್ಟೆಕಿಚ್ಚು ಇರಬಹುದು ಎಂದು ತೋರಿಸುತ್ತದೆ' ಎಂದು ಕೆಆರ್ಕೆ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ, 'ರಾಧೇ' ಚಿತ್ರದ ವಿಮರ್ಶೆ ಮಾಡುವ ಭರದಲ್ಲಿ ಕೆಆರ್ಕೆ ತಮ್ಮ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಅವರ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.