

ಕೃತಿ ಸನೋನ್ ಅಭಿನಯದ ‘ಮಿಮಿ’ ಚಿತ್ರವು ಜುಲೈ 30ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಬೇಕಿತ್ತು. ಈ ವಿಷಯವಾಗಿ ಸಾಕಷ್ಟು ಪ್ರಚಾರವನ್ನೂ ಮಾಡಲಾಗಿತ್ತು. ಆದರೆ, ಚಿತ್ರ ಬಿಡುಗಡೆಗೆ ನಾಲ್ಕು ದಿನಗಳಿರುವಾಗಲೇ, ಯಾರೋ ಲೀಕ್ ಮಾಡಿದ್ದಾರೆ. ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಯಾರೋ ಬಿಡುಗಡೆ ಮಾಡಿಬಿಟ್ಟಿದ್ದಾರೆ. ಹೀಗೆ ಏಕಾಏಕಿಯಾಗಿ ಚಿತ್ರ ಬಿಡುಗಡೆಯಾಗಿದ್ದನ್ನು ನೋಡಿ ಗಾಬರಿಗೊಂಡಿರುವ ಚಿತ್ರತಂಡದವರು, ಚಿತ್ರವನ್ನು ಅಧಿಕೃತವಾಗಿಯೇ ನೆಟ್ಫ್ಲಿಕ್ಸ್ನಲ್ಲಿ ನಾಲ್ಕು ದಿನಗಳ ಮುನ್ನವೇ ಬಿಡುಗಡೆ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಸಲ್ಮಾನ್ ಅಭಿನಯದ ‘ರಾಧೇ’ ಚಿತ್ರಕ್ಕೂ ಇದೇ ಸಮಸ್ಯೆ ಆಗಿತ್ತು. ಚಿತ್ರತಂಡದವರು ಈ ಕುರಿತು ದೂರು ದಾಖಲಿಸಿದರಾದರೂ, ಅಷ್ಟರಲ್ಲಿ ಸಾಕಷ್ಟು ಡ್ಯಾಮೇಜ್ ಆಗಿತ್ತು. ಈ ತರಹ ಮಾಡಿದರೆ ತೊಂದರೆಗೆ ಸಿಲುಕುತ್ತೀರಿ ಎಂದು ಸಲ್ಮಾನ್ ಖಾನ್ ಸಹ ಚಿತ್ರವನ್ನು ಪೈರಸಿ ಮಾಡಿದವರಿಗೆ ಎಚ್ಚರಿಸಿದ್ದರು. ಆದರೆ, ಅದರಿಂದ ಏನೂ ಆಗಲಿಲ್ಲ. ಈಗ ‘ಮಿಮಿ’ಗೂ ಇದೇ ಪರಿಸ್ಥಿತಿ ಎದುರಾಗಿದೆ. ಇನ್ನು, ‘ಮಿಮಿ’ ಹಠಾತ್ತನೆ ಬಿಡುಗಡೆಯಾಗಿದ್ದರೂ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.