ಶ್ರೀಕೃಷ್ಣ@ಜಿಮೇಲ್​ ಡಾಟ್​ಕಾಮ್​ ಚಿತ್ರ ಶುರು

Sri Krishna - Final
Published on

ಲಾಕ್​ಡೌನ್​ ನಂತರ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಸಿನಿಮಾ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಬುಧವಾರವಷ್ಟೇ ಲವ್​ ಮಾಕ್ಟೇಲ್​ ಚಿತ್ರದ ಸೀಕ್ವೆಲ್​ನ ಸ್ಕ್ರಿಪ್ಟ್​ ಪೂಜೆ ನಡೆದಿತ್ತು. ಈಗ ಕೃಷ್ಣ ಅಭಿನಯದ ಶ್ರೀಕೃಷ್ಣ@ಜಿಮೇಲ್​ ಡಾಟ್​ಕಾಮ್​ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಅಧಿಕೃತವಾಗಿ ನಡೆದಿದೆ.

ಶ್ರೀಕೃಷ್ಣ@ಜಿಮೇಲ್​ ಡಾಟ್​ಕಾಮ್​ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆಯನ್ನು ಕೆಲವು ದಿನಗಳ ಹಿಂದೆಯೇ ನಾಗಶೇಖರ್​ ಕಳುಹಿಸಿದ್ದಾರೆ. ಮುಹೂರ್ತಕ್ಕೆ ಬರಬೇಡಿ, ಇದ್ದಲ್ಲೇ ಚಿತ್ರತಂಡವನ್ನು ಹಾರೈಸಿಬಿಡಿ ಎಂದು ಆಹ್ವಾನ ಪತ್ರಿಕೆಯಲ್ಲೇ ನಮೂದಿಸಿದ್ದರು. ಅದರಂತೆ, ಕೆಲವೇ ಜನರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಶ್ರೀಕೃಷ್ಣ@ಜಿಮೇಲ್​ ಡಾಟ್​ಕಾಮ್​ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ.

ವಿಶೇಷ ಎಂದರೆ, ಡಾ. ರಾಜಕುಮಾರ್​ ಅವರ ಮೇಲೆ ಮೊದಲ ದೃಶ್ಯ ಚಿತ್ರೀಕರಣ ಮಾಡಲಾಯಿತು. ಹಿರಿಯ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಮೊದಲ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ್​ ನಾಗರಾಜ್​, ನಾಗಶೇಖರ್​, ಕೃಷ್ಣ, ಮಿಲನಾ ನಾಗರಾಜ್​ ಮುಂತಾದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಚಿತ್ರದ ಹಾಡುಗಳ ಕಂಪೋಸಿಂಗ್​ ಕೆಲಸವೂ ಶುರುವಾಗಿದೆ. ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಅರ್ಜುನ್​ ಜನ್ಯ ಮ್ಯೂಸಿಕ್​ ಕಂಪೋಸ್​ ಮಾಡುತ್ತಿದ್ದಾರೆ ಎಂದು ನಾಗಶೇಖರ್​ ಹೇಳಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.

ಅಂದಹಾಗೆ, ಕೃಷ್ಣಗೆ ನಾಯಕಿಯ ಹುಡುಕಾಟ ನಡೆದಿದ್ದು, ರಾಧಿಕಾ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲಾಗಿದೆಯಂತೆ. ಈಗಾಗಲೇ ರಾಧಿಕಾ ಅವರು ಚಿತ್ರದ ಕಥೆ ಕೇಳಿದ್ದು, ಇನ್ನಷ್ಟೇ ಗ್ರೀನ್​ ಸಿಗ್ನಲ್​ ನೀಡಬೇಕಿದೆ. ಸದ್ಯಕ್ಕೆ ಮುಹೂರ್ತ ಮುಗಿಸಿರುವ ಚಿತ್ರತಂಡದವರು, ಚಿತ್ರೀಕರಣ ಮಾಡುವುದಕ್ಕೆ ಅನುಮತಿಗಾಗಿ ಕಾಯುತ್ತಿದ್ದಾರೆ. ಅನುಮತಿ ಸಿಕ್ಕ ತಕ್ಷಣ ಶ್ರೀಕೃಷ್ಣ@ಜಿಮೇಲ್​ ಡಾಟ್​ಕಾಮ್​ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net