ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ 'ಯಲಾ ಕುನ್ನಿ' ಎಂದು ನಾಮಕರಣ …

Komal - Ela Kunni
Published on

ಬೆಂಗಳೂರು: ಕೋಮಲ್​ ಮತ್ತೊಮ್ಮೆ ಬಿಜಿಯಾಗಿದ್ದಾರೆ. 'ಕಾಲಾಯ ನಮಃ' ಮತ್ತು 'ರೊಲೆಕ್ಸ್​' ಚಿತ್ರಗಳ ನಂತರ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ 'ಯಲಾ ಕುನ್ನಿ' ಎಂದು ಹೆಸರಿಡಲಾಗಿದೆ. ಈ ಹೆಸರಿಗೆ 'ಮೇರಾ ನಾಮ್ ವಜ್ರಮುನಿ!' ಎಂಬ ಅಡಿಬರಹ ಸಹ ಇದೆ.

ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ 'ಎಲಾ ಕುನ್ನಿ' ಚಿತ್ರವನ್ನು ಎನ್.ಆರ್. ಪ್ರದೀಪ ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮುನ್ನ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಮುಂತಾದ ನಿರ್ದೇಶಕರ ಜತೆಗೆ ಕೆಲಸ ಮಾಡಿರುವ ಪ್ರದೀಪ್​ಗೆ ಇದು ಮೊದಲ ಚಿತ್ರ.

1981ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಹಳ್ಳಿ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗುವುದಂತೆ.‌ ಚಿತ್ರದಲ್ಲಿ ವಜ್ರಮುನಿಯಾಗಿ ಕೋಮಲ್ ರೆಟ್ರೋ ಲುಕ್​ನಲ್ಲಿ ಕಾನಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ 'ಫ್ರೆಂಚ್ ಬಿರಿಯಾನಿ' ಖ್ಯಾತಿಯ ಮಹಾಂತೇಶ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಯಲಾ ಕುನ್ನಿ - ಮೇರಾ ನಾಮ್ ವಜ್ರಮುನಿ!' ಚಿತ್ರಕ್ಕೆ ನಿರ್ದೇಶಕ ಪ್ರದೀಪ್​ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಧರ್ಮವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net