'ರೊಲೆಕ್ಸ್​' ಕಟ್ಟಿಕೊಂಡು ಸೋನಲ್​ ಜತೆಗೆ ಚಿತ್ರೀಕರಣಕ್ಕೆ ಹೊರಟರು ಕೋಮಲ್​ …

Rolex - Sonal Monteiro
Published on

ಬೆಂಗಳೂರು: ಕೋಮಲ್​ ಇತ್ತೀಚಿನ ದಿನಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ಕೋಮಲ್​ ಅಭಿನಯದ 'ಕಾಲಾಯ ನಮಃ' ಎಂಬ ಚಿತ್ರದ ಚಿತ್ರೀಕರಣ ಮುಗಿದಿದೆ. ಈಗ ಅವರ ಇನ್ನೊಂದು ಹೊಸ ಚಿತ್ರದ ಮುಹೂರ್ತವಾಗಿದೆ.

'ರೊಲೆಕ್ಸ್​' ಚಿತ್ರದ ಮುಹೂರ್ತ ಗುರುವಾರ ಆಗಿದೆ. ಇಂದಿನಿಂದ ಚಿತ್ರೀಕರನ ಸಹ ಶುರುವಾಗಿದೆ. ಚಿತ್ರದ ಘೋಷಣೆಯಾದಾಗ, ಕೋಮಲ್​ ಹೆಸರು ಮಾತ್ರ ಕೇಳಿಬಂದಿತ್ತು. ಈಗ ಅವರಿಗೆ ನಾಯಕಿಯಾಗಿ ಸೋನಲ್​ ಮಾಂತೆರೋ ನಟಿಸುತ್ತಿದ್ದಾರೆ. ಶ್ರೀನಿವಾಸ್​ ಮಂಡ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಕೋಮಲ್​, ''ರೊಲೆಕ್ಸ್' ಅನ್ನೋದು ಒಂದು ಬ್ರ್ಯಾಂಡ್. ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಎಳೆ. ಇದೊಂದು ಮನರಂಜನಾತ್ಮಕ ಚಿತ್ರ. ಸಾಕಷ್ಟು ತಿರುವುಗಳಿವೆ. 'ಮಿಸ್ಟರ್​ ಗರಗಸ' ನಂತರ ಈ ತರಹದ್ದೊಂದು ಪ್ರಯೋಗ ಮಾಡುತ್ತಿದ್ದೇನೆ. ಅಭಿನಯಕ್ಕೆ ಸಾಕಷ್ಟು ಅವಕಾಶ ಇದೆ. ಈಗಾಗಲೇ ಎಲ್ಲ ಹಾಡುಗಳು ರೆಕಾರ್ಡ್ ಆಗಿದೆ. ಹಾಡುಗಳು ಹಿಟ್​ ಆಗುವ ಎಲ್ಲ ಸೂಚೆನಗಳೂ ಇವೆ' ಎನ್ನುತ್ತಾರೆ.

ಈಗಾಗಲೇ ಸೋನಲ್​, 'ಶುಗರ್ ಫ್ಯಾಕ್ಟರಿ', 'ಮಿ. ನಟ್ವರ್ ಲಾಲ್', 'ಬುದ್ದಿವಂತ 2', 'ಗರಡಿ', 'ಮಹಾದೇವ', 'ತಲ್ವಾರ್ ಪೇಟೆ, 'ಸರೋಜಿನಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸಾಲಿಗೆ ಈಗ 'ರೊಲೆಕ್ಸ್​' ಸಹ ಸೇರಿದೆ. ಈ ಚಿತ್ರಕ್ಕಾಗಿ ಸೋನಲ್​ 25 ದಿನ ಕಾಲ್​ಶೀಟ್​ ಕೊಟ್ಟಿದ್ದಾರಂತೆ.

'ರೊಲೆಕ್ಸ್​' ಚಿತ್ರವನ್ನು ಫೀನಿಕ್ಸ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ನಡಿ ನಿರ್ಮಾಣ ಮಾಡುತ್ತಿದ್ದು, ಕೋಮಲ್​ ಮತ್ತು ಸೋನಲ್​ ಜತೆಗೆ ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ರಾಕೇಶ್​ ಸಿ ತಿಲಕ್​ ಅವರ ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್​ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net