ಮುಂದಿನ ವರ್ಷದ ಆರಂಭದಲ್ಲೇ ಮದುವೆಯಾಗಲಿದ್ದಾರೆ ಕೆಎಲ್​ ರಾಹುಲ್​-ಆಥಿಯಾ

Rahul-Athiya
Published on

ಮುಂಬೈ: ಮುಂದಿನ ವರ್ಷ ಮತ್ತೊಂದು ಸ್ಟಾರ್​ ಜೋಡಿ ಹಸೆಮಣೆಯೇರಲು ಸಜ್ಜಾಗುತ್ತಿದೆ. ಸದ್ಯ ಭಾರೀ ಸುದ್ದಿಯಲ್ಲಿದ್ದ ಕ್ರಿಕೆಟಿಗ ಕೆ ಎಲ್​ ರಾಹುಲ್​ ಮತ್ತು ಆಥಿಯಾ ಶೆಟ್ಟಿ ಮುಂದಿನ ವರ್ಷ ಆರಂಭದಲ್ಲೇ ಮದುವೆಯಾಗುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ.

ಸದ್ಯ ಈ ಇಬ್ಬರೂ ಡೇಟಿಂಗ್​ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇರುವ ವಿಚಾರವಾದರೂ, ಮದುವೆ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದೀಗ ಇದಕ್ಕೆ ಸ್ವತಃ ಆಥಿಯಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಸುನಿಲ್​ ಶೆಟ್ಟಿ ಅವರ ಪುತ್ರಿಯಾಗಿರುವ ಆಥಿಯಾ ಕೂಡ ನಟಿಯಾಗಿದ್ದಾರೆ. ಕೆಲವೇ ಚಿತ್ರದಲ್ಲಿ ನಟಿಸಿದ್ದು, ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಆಥಿಯಾಗೆ ಸಿನಿಮಾ ರಂಗ ಅಷ್ಟೇನೂ ಕೈಹಿಡಿಯಲಿಲ್ಲ. ಆದರೂ ಉತ್ತಮ ನಟನೆ,ಪ್ರತಿಭಾವಂತೆಯಾಗಿರುವ ಆಥಿಯಾ ಸದ್ಯ ಮದುವೆ ಬಗ್ಗೆ ಚರ್ಚೆಯಲ್ಲಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಆಥಿಯಾ, ಹೌದು ನಾವು ಮದುವೆಯಾಗಲಿದ್ದೇವೆ, ನಮ್ಮ ಮದುವೆಗೆ ನಿಮ್ಮನ್ನೂ ಕರೆಯುವೆ ಎಂದಿದ್ದಾರೆ. ಇದೇ ವರ್ಷದ ಡಿಸೆಂಬರ್​ನಲ್ಲಿ ಮದುವೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಎರಡೂ ಕುಟುಂಬಗಳು ಚರ್ಚಿಸಿ ಬರುವ ವರ್ಷದ ಆರಂಭದಲ್ಲೇ ಮದುವೆ ನಡೆಸುವ ತೀರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮದುವೆ ಮುನ್ನವೇ ಈ ಜೋಡಿ ಹೊಸ ಮನೆಯೊಂದು ಖರೀದಿಸಿದ್ದು, ಮುಂಬೈನ ಸಂಧು ಪ್ರದೇಶದಲ್ಲಿ ರಣಬೀರ್​​ ಕಪೂರ್​ ನಿವಾಸದ ಪಕ್ಕದಲ್ಲೇ ಎರಡು ಭವ್ಯ ಬಂಗಲೆಯನ್ನು ಖರೀದಿಸಿದ್ದಾರಂತೆ. ಆಥಿಯಾ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net