'ಖಾಸಗಿ ಪುಟಗಳ'ಲ್ಲಿ ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ...

Kaasagi Putagalu
Published on

ಬೆಂಗಳೂರು: ಕಾಲೇಜು ಹುಡುಗ-ಹುಡುಗಿಯರ ಕುರಿತಾದ ಸಾಕಷ್ಟು ಲವ್​ಸ್ಟೋರಿಗಳು ಇದುವರೆಗೂ ತೆರೆಯ ಮೇಲೆ ಬಂದಿವೆ. ಅಂಥದ್ದೇ ಇನ್ನೊಂದು ಹೊಸ ಪ್ರಯತ್ನ 'ಖಾಸಗಿ ಪುಟಗಳು'. ಇದು ಬರೀ ಹೊಸ ಪ್ರಯತ್ನವಷ್ಟೇ ಅಲ್ಲ, ಹೊಸಬರ ಪ್ರಯತ್ನವೂ ಹೌದು. ಏಕೆಂದರೆ, ಈ ಚಿತ್ರದಲ್ಲಿ ಹೊಸಬರೇ ದಂಡೇ ಇದೆ.

'ಖಾಸಗಿ ಪುಟಗಳು' ಚಿತ್ರವು ಇದೇ ನ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್​ ಸಹ ಬಿಡುಗಡೆಯಾಗಿದೆ. ಮೊದಲೇ ಹೇಳಿದಂತೆ ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ಹೊತ್ತ ಸಿನಿಮಾವಿದು. ಕಿರುಚಿತ್ರದಲ್ಲಿ ನಟಿಸಿ ಅನುಭವ ಇರುವ ವಿಶ್ವ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ.

ನಾಯಕ ವಿಶ್ವ ಈ ಹಿಂದೆ ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದರಂತೆ. ಸಿನಿಮಾಗಳಲ್ಲಿ ಹೀರೋ ಆಗಬೇಕು ಎಂಬ ಆಸೆ ಇತ್ತಂತೆ. ಅದು ಈ ಚಿತ್ರದ ಮೂಲಕ ಈಡೇರಿರುವ ವಿಷಯ ಅವರಿಗೆ ಖುಷಿ ತಂದಿದೆ. ಇನ್ನು, ನಾಯಕಿ ಶ್ವೇತ ಡಿಸೋಜ ಈ ಹಿಂದೆ ಹಿಂದಿಯಲ್ಲಿ 'ವೈ' ಎಂಬ ಸಿನಿಮಾದಲ್ಲಿ ನಟಿಸಿದ್ದರಂತೆ. 'ಇದು ನನ್ನ ಮೊದಲ ಕನ್ನಡ ಸಿನಿಮಾ. ಭೂಮಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಎರಡು ಶೇಡ್​ನಲ್ಲಿ ಕಾಣಸಿಗಲಿದ್ದೇನೆ'  ಎಂದು ತಮ್ಮ ಪಾತ್ರದ ಬಗ್ಗೆ ಅವರು ಹೇಳಿಕೊಳ್ಳುತ್ತಾರೆ.

ಈ ಚಿತ್ರದ ವಿಶೇಷತೆಯೆಂದರೆ, ವಾಸುಕಿ ವೈಭವ್ ಸಂಗೀತ ನಿರ್ದೇಶಿಸಿರುವುದು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ.

ಎಸ್​.ವಿ.ಎಂ ಮೋಶನ್ ಪಿಕ್ಚರ್ ಬ್ಯಾನರ್ ನಡಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ನಿರ್ಮಿಸಿರುವ ಈ ಚಿತ್ರವನ್ನು ಸಂತೋಷ್​ ಶ್ರೀಕಂಠಪ್ಪ ಬರೆದು ನಿರ್ದೇಶನ ಮಾಡಿದ್ದಾರೆ. ವಿಶ್ವಜಿತ್​ ರಾವ್​ ಛಾಯಾಗ್ರಹಣ ಮಾಡಿರುವ ಈ ಚಿತ್ರದಲ್ಲಿ ಚೇತನ್ ದುರ್ಗಾ, ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net