ನಾಳೆ ಕೆಜಿಎಫ್ ಖಳನ ಕ್ರೌರ್ಯ ಅನಾವರಣ

KGF
Published on

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ‘ಕೆಜಿಎಫ್ - ಚಾಪ್ಟರ್ 2’ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕರೊನಾ ಹಾವಳಿ ತಗ್ಗುತ್ತಿದ್ದಂತೆ ಬಾಕಿ ಉಳಿದ ಚಿತ್ರೀಕರಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ವೊಂದು ಹೊರಬಂದಿದೆ. ‘ಕೆಜಿಎಫ್ 2’ನಲ್ಲಿ ಸಂಜಯ್ ದತ್ ಖಳನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಳೆದ ವರ್ಷವೇ ಸಂಜಯ್ ದತ್ ಹುಟ್ಟುಹಬ್ಬದ ನಿಮಿತ್ತ ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಕ್ಯಾರೊಲಿನಾ ಮರಿನ್ ತಂದೆ ಅಪಘಾತಕ್ಕೆ ಬಲಿ

ಇದೀಗ ಮತ್ತೊಂದು ವರ್ಷ ಕಳೆದಿದೆ. ಜುಲೈ 29ಕ್ಕೆ ದತ್, 60ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಂದು ಚಿತ್ರತಂಡದಿಂದ ವಿಶೇಷ ಉಡುಗೊರೆಯೊಂದು ಬಿಡುಗಡೆ ಆಗಲಿದೆ. ಅಂದಹಾಗೆ, 29ಕ್ಕೆ ಟೀಸರ್ ರಿಲೀಸ್ ಆಗಬಹುದಾ ಅಥವಾ ಸಂಜಯ್ ದತ್ ಅವರ ಲುಕ್ ಬಿಡುಗಡೆ ಆಗಬಹುದಾ ಎಂಬ ಪ್ರಶ್ನೆ ಇದೆ. ಈ ವಿಷಯವಾಗಿ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ಸೋಮವಾರ, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡವು, ಸಂಜಯ್ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಇರುವ ಎಲ್ಲ ಪ್ರಶ್ನೆಗಳಿಗೆ, 29ರಂದು ಉತ್ತರ ಸಿಗಲಿದೆ ಎಂದಷ್ಟೇ ಹೇಳಿದೆ. ‘ಖಳನಾಯಕನ ಕ್ರೌರ್ಯತೆ’ಯನ್ನು ಅನಾವರಣ ಮಾಡುವುದಾಗಿ ತಿಳಿಸಿದೆ. ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ವಿಜಯಕುಮಾರ್ ಕಿರಗಂದೂರು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net