

ಇತ್ತೀಚಿನ ಕೆಲ ದಿನಗಳಿಂದ ಬಾಲಿವುಡ್ನಲ್ಲಿ ಸುಶಾಂತ್ ಸಿಂಗ್ ಸಾವಿನ ಜತೆಜತೆಗೆ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಗಳು ಹೆಚ್ಚೆಚ್ಚು ನಡೆಯುತ್ತಿವೆ. ನನ್ನ ವಿರುದ್ಧ ಕೆಲ ಗ್ಯಾಂಗ್ಗಳು ಕೆಲಸ ಮಾಡುತ್ತಿವೆ ಎಂದು ಎ.ಆರ್. ರಹಮಾನ್ ಹೇಳಿಕೆ ನೀಡಿದ್ದೇ ತಡ, ಅದರ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೀಗ ಗಾಯಕ ಮತ್ತು ಗಾಯಕಿಯರಿಗೆ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರೇಷಮ್ಮಿಯಾ ಕಿವಿ ಮಾತೊಂದನ್ನು ಹೇಳಿದ್ದಾರೆ.
'ಸಾಧ್ಯವಾದಷ್ಟು ಗಾಯಕರೆಲ್ಲ ಅವರ ಹಾಡಿಗೆ ಅವರೇ ಮ್ಯೂಸಿಕ್ ಕಂಪೋಸ್ ಮಾಡಿಕೊಂಡು ಹಾಡಿದರೆ, ಹಾಡಿಗೆ ಮತ್ತಷ್ಟು ನ್ಯಾಯ ಒದಗಿಸಬಹುದು. ಆ ತಾಕತ್ತು ಅರ್ಜಿತ್ ಸಿಂಗ್ ಅವರಲ್ಲಿದೆ. ನಮ್ಮ ಹಾಡಿಗೆ ನಾವೇ ಕಂಪೋಸ್ ಮಾಡಿದಾಗ, ಆ ಹಾಡಿನ ಆಳಕ್ಕೆ ಇಳಿಯಬಹುದು. ಕೇಳುಗರಿಗೂ ಆ ಹಾಡು ಮನಕ್ಕೆ ಮುಟ್ಟಲಿದೆ‘ ಎಂದಿದ್ದಾರೆ.
‘ಈ ಮೊದಲು ಒಂದು ಹಾಡು ಸಿದ್ಧವಾಗಬೇಕಾದರೆ, 8ರಿಂದ 10 ಗಂಟೆ ಸಮಯ ಬೇಕಾಗುತ್ತಿತ್ತು. ಮ್ಯೂಸಿಕ್ ಸಲಕರಣೆ, ಪ್ರಾಕ್ಟಿಸ್ ಮಾಡುವುದಕ್ಕೆ ಸಮಯ ಪೋಲಾಗುತ್ತಿತ್ತು. ಇದೀಗ ಅದ್ಯಾವುದು ಇಲ್ಲ. ಸಂಗೀತ ನಿರ್ದೇಶಕ ಟ್ಯೂನ್ ಅನ್ನು ವಾಟ್ಸ್ ಅಪ್ ಮೂಲಕ ಕಳುಹಿಸುತ್ತಾನೆ. ಅದಕ್ಕೆ ಗಾಯಕರು ಧ್ವನಿ ನೀಡುತ್ತಾರೆ. ಅಲ್ಲಿ ಗುಣಮಟ್ಟದ ಹಾಡುಗಳನ್ನು ನೀಡುತ್ತೇವೆ ಎಂದು ಅನಿಸದೆ ಇರದು. ಹಾಗಾಗಿ ಗಾಯಕರು ಅವರವರ ಹಾಡುಗಳನ್ನು ಅವರೇ ಕಂಪೋಸ್ ಮಾಡಿಕೊಂಡರೆ ಒಳ್ಳೆಯದು.
ಮೈಕಲ್ ಜಾಕ್ಸನ್ ಟಾಪ್ ಹಾಡುಗಾರ. ಆದರೆ, ಅವರು ಯಾವತ್ತೂ ಟಾಮ್ ಕ್ರೂಸ್ ಸಿನಿಮಾಗಳಿಗೆ ಧ್ವನಿ ನೀಡಲಿಲ್ಲ. ಅದು ಅವರ ಸ್ವಂತಿಕೆ. ನಮ್ಮಲ್ಲಿನ ಗಾಯಕರಿಗೂ ನಾನು ಅದೇ ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಹಾಡಿಗೆ ನೀವೇ ಸೃಷ್ಟಿಕರ್ತರಾಗಿ’ ಎಂದಿದ್ದಾರೆ.