ಕೆಲವರು ಸುಶಾಂತ್​ ಸಾವಿನ ಮೈಲೇಜ್​ ತೆಗೆದುಕೊಳ್ತಿದ್ದಾರೆ: ಸೋನು

Kangana - Sonu
Published on

ಬಾಲಿವುಡ್​ ನಟ ಸೋನು ಸೂದ್​, ಕಳೆದ ಕೆಲವು ತಿಂಗಳುಗಳು ಅಷ್ಟೆಲ್ಲಾ ಸುದ್ದಿಯಲ್ಲಿದ್ದರೂ, ಅವರ್ಯಾವತ್ತೂ ಸುಶಾಂತ್​ ಸಾವಿನ ಕುರಿತು ಮಾತನಾಡಿರಲಿಲ್ಲ. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸುವುದರಲ್ಲಿ ಬ್ಯುಸಿಯಾಗಿದ್ದ ಸೋನು, ಇದೀಗ ಮೊದಲ ಬಾರಿಗೆ ಸುಶಾಂತ್​ ಸಾವಿನ ಕುರಿತಾಗಿ ಮಾತನಾಡಿದ್ದಾರೆ.

ಸುಶಾಂತ್​ ಸಾವಿನ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಸುಶಾಂತ್ ಸಾವಿನ ವಿಷಯದಲ್ಲಿ ಹಲವರು ಮೈಲೇಜ್​ ತೆಗೆದುಕೊಳ್ಳುತ್ತಿದ್ದಾರೆ. ಸುಮ್ಮನೆ ಅವರ ಕುಟುಂಬದವರ ಬಗ್ಗೆ ಯೋಚಿಸಿ. ಅವರೆಲ್ಲೋ ಪಟ್ನಾದಲ್ಲಿದ್ದಾರೆ. ಅವರ ಮನಸ್ಸಿಗೆ ಈ ಎಲ್ಲಾ ವಿಷಯಗಳಿಂದ ಅದೆಷ್ಟು ಘಾಸಿಯಾಗುತ್ತಿರಬಹುದು ಯೋಚಿಸಿ. ವಿಚಿತ್ರ ಎಂದರೆ, ಸುಶಾಂತ್​ ಅವರನ್ನು ಒಮ್ಮೆಯೂ ಭೇಟಿ ಮಾಡದವರು ಸಹ ಇಂದು ಕುಳಿತು ದೊಡ್ಡ ಚರ್ಚೆ ಮಾಡುತ್ತಿದ್ದಾರೆ' ಎಂದು ಬೇಸರಿಸಿಕೊಂಡಿದ್ದಾರೆ.

ಸುಶಾಂತ್​ ಸಾವಿನಲ್ಲಿ ಮೈಲೇಜ್​ ತೆಗೆದುಕೊಳ್ಳುವ ವಿಷಯವಾಗಿ ಹಲವರು ಮಾತನಾಡಿದ್ದಾರೆ. ಸುಶಾಂತ್​ ಸಿಂಗ್​ ಅವರನ್ನು ಮುಂದಿಟ್ಟುಕೊಂಡು ಏನೇನೋ ವಿಷಯಗಳನ್ನು ಚರ್ಚೆ ಮಾಡುವುದನ್ನು ಬಿಡಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಸೋನು ಸಹ ಈ ಸಾಲಿಗೆ ಸೇರಿದ್ದಾರೆ.

ಇಷ್ಟಕ್ಕೂ ಸೋನು ಮಾತನಾಡಿದ್ದು ಯಾರ ಬಗ್ಗೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಸೋನು ಮಾತುಗಳು ಅಕ್ಷರಶಃ ನಿಜವಾದರೂ, ಅವರು ಈ ವಿಷಯದಲ್ಲಿ ಯಾರನ್ನೋ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಂಗನಾ ಅವರನ್ನೇ ಗಮನದಲ್ಲಿಟ್ಟುಕೊಂಡು, ಸೋನು ಈ ವಿಷಯವನ್ನು ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ, 'ಮಣಿಕರ್ಣಿಕಾ' ಸಿನಿಮಾದ ವಿಷಯವಾಗಿ ಸೋನು ಮತ್ತು ಕಂಗನಾ ನಡುವೆ ದೊಡ್ಡ ಯುದ್ಧ ಆಗಿತ್ತು. ಆ ಚಿತ್ರದಲ್ಲಿ ಸೋನು ಸಹ ಪ್ರಮುಖ ಪಾತ್ರ ವಹಿಸಿದ್ದರು. ಯಾವಾಗ, ಚಿತ್ರದ ನಿರ್ದೇಶಕರನ್ನು ಕಂಗನಾ ಕಿತ್ತು ಬಿಸಾಕಿದರೋ, ಆಗ ಸೋನು ಸಹ ಚಿತ್ರದಿಂದ ಹೊರನಡೆದರು.

ಚಿತ್ರದಿಂದ ಸೋನು ಹೊರನಡೆದಿದ್ದರ ಬಗ್ಗೆ ಕಂಗನಾ ಕಿಡಿಕಾರಿದ್ದರು. ಅಷ್ಟೇ ಅಲ್ಲ, ಅವರ ಪಾತ್ರವನ್ನು ಕಡಿಮೆ ಮಾಡಿದ್ದರು. ಆ ನಂತರ ಇಬ್ಬರೂ ದೂರವಾದರು. ಈಗ ಸೋನು, ಸುಶಾಂತ್​ ಸಾವಿನ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ಸೋನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಕಂಗನಾ ಯಾವಾಗ ತಿರುಗಿ ಬೀಳುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net