ಜನವರಿ 08ಕ್ಕೆ 'ಕೆಜಿಎಫ್​ 2' ಚಿತ್ರದ ಮೊದಲ ಟೀಸರ್​ ...

KGF 2 - Final
Published on

ಹೈದರಾಬಾದ್​: 'ಕೆಜಿಎಫ್​ 2' ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಸಂಜಯ್​ ದತ್​ ಮುಗಿಸಿದ್ದಾರೆ ಮತ್ತು ಈ ಮೂಲಕ ಚಿತ್ರದ ಹೈದರಾಬಾದ್​ ಭಾಗದ ಚಿತ್ರೀಕರಣ ಶನಿವಾರ ರಾತ್ರಿಯಷ್ಟೇ ಮುಗಿದಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಬಂದಿತ್ತು. ಇದೀಗ ಚಿತ್ರದ ಮೊದಲ ಟೀಸರ್​ ಜನವರಿ 08ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಪ್ರಶಾಂತ್​ ನೀಲ್​ ಘೋಷಿಸಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ಡಿಸೆಂಬರ್​ 21ರ ಸೋಮವಾರದಂದು ಚಿತ್ರದ ಕುರಿತಾಗಿ ಒಂದು ಘೋಷಣೆ ಮಾಡುವುದಾಗಿ ಅವರು ಹೇಳಿದ್ದರು. ಅದರಂತೆ, ಇಂದು ಬೆಳಿಗ್ಗೆ ಚಿತ್ರದ ಇನ್ನೊಂದು ಹೊಸ ಪೋಸ್ಟರ್​ ಬಿಡುಗಡೆಯಾಗಿದ್ದು, ಅದರ ಜೊತೆಗೆ, ಜನವರಿ 08ರಂದು ಟೀಸರ್​ ಬಿಡುಗಡೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.

ಹಾಗೆ ನೋಡಿದರೆ, ಇದು ಹೊಸ ವಿಷಯವೇನೂ ಅಲ್ಲ. ಜನವರಿ 08ರಂದು 'ರಾಕಿಂಗ್​ ಸ್ಟಾರ್​' ಯಶ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಟೀಸರ್​ ಬಿಡುಗಡೆ ಆಗುತ್ತದೆ ಎಂಬ ವಿಷಯ ಮುಂಚೆಯೇ ಕೇಳಿಬಂದಿತ್ತು. ಅದನ್ನು ಪ್ರಶಾಂತ್​ ನೀಲ್​, ಇದೀಗ ಅಧಿಕೃತ ಮಾಡಿದ್ದಾರೆ ಅಷ್ಟೇ.

ಇನ್ನು, ಕಳೆದ ಕೆಲವು ದಿನಗಳಿಂದ ಹೈದರಾಬಾದ್​ನಲ್ಲಿ 'ಕೆಜಿಎಫ್​ 2' ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಫೈಟ್​ ಇದೀಗ ಮುಗಿದಿದೆ. ಇನ್ನು ಒಂದು ದಿವಸದ ಪ್ಯಾಚ್​ವರ್ಕ್​ ಅಷ್ಟೇ ಬಾಕಿ ಉಳಿದಿದ್ದು, ಸದ್ಯದಲ್ಲೇ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ.

'ಕೆಜಿಎಫ್​ 2' ಚಿತ್ರದಲ್ಲಿ ಯಶ್​ ಜತೆಗೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್​, ಸಂಜಯ್​ ದತ್​, ಹರೀಶ್​ ರೈ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ಪ್ರಶಾಂತ್​ ನೀಲ್​. ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್​ ಬ್ಯಾನರ್​ನಡಿ ವಿಜಯ್​ಕುಮಾರ್ ಕಿರಗಂದೂರು ನಿರ್ಮಿಸುತ್ತಿದ್ದು, ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net