KGF-2 ಡಬ್ಬಿಂಗ್ ಮುಗಿಸಿದ 'ಅಧೀರ'; ಡಬ್ಬಿಂಗ್ ಮಾಡಿದ್ದು ಹಿಂದಿಯಲ್ಲೊ ಅಥವಾ ಕನ್ನಡದಲ್ಲೊ?

Published on

ಮುಂಬೈ: ಕಳೆದ ವರ್ಷ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ ಅವರು ಈಗ ಕೆಜಿಎಫ್‌ನಲ್ಲಿನ ಶಕ್ತಿಶಾಲಿ ಅಧೀರ ಪಾತ್ರಕ್ಕೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. 'ಕೆಜಿಎಫ್: ಅಧ್ಯಾಯ 2' ಮುಂದಿನ ವರ್ಷ ಬಿಡುಗಡೆಯಾಗುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದು ಕನ್ನಡದಲ್ಲಿ ನಟ ಸಂಜಯ್ ದತ್ ಅವರ ಮೊದಲ ಸಿನಿಮಾ. ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಸಂಜಯ್ ದತ್, ''#KGF-2 ಗಾಗಿ ಡಬ್ಬಿಂಗ್ ಸೆಷನ್‌ಗಳನ್ನು ಪೂರ್ಣಗೊಳಿಸಲಾಗಿದೆ'' ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಅವರು ಹಂಚಿಕೊಂಡಿರುವ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಂಜಯ್ ದತ್ ಅವರ ಅಧೀರ ಪಾತ್ರಕ್ಕೆ ಧ್ವನಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. 

ಇದೀಗ, ಸ್ವತಃ ಸಂಜಯ್ ದತ್ ಅವರೆ ಡಬ್ಬಿಂಗ್ ನೀಡಿದ್ದು ಚಿತ್ರಪ್ರೇಮಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹೀಗಿದ್ದರು, ಸಂಜಯ್ ದತ್ ಡಬ್ಬಿಂಗ್ ಮಾಡಿದ್ದು ಚಿತ್ರದ ಹಿಂದಿ ಅವತರಣಿಕೆಗೆಯೇ ಅಥವಾ ಕನ್ನಡಕ್ಕೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಈ ಕುತೂಹಲಕ್ಕೆ ಸಿನಿಮಾ ತಂಡವೆ ಉತ್ತರ ಕೊಡಬೇಕಿದೆ. ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರವೀನಾ ಟಂಡನ್, ನಾಗಾಭರಣ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್ ನಟಿಸಿರುವ ಈ ಸಿನಿಮಾ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಮತ್ತು ನಟ ಸಂಜಯ್ ದತ್ ಅವರನ್ನು ಒಳಗೊಂಡ ಕೆಜಿಎಫ್‌ನ ಕ್ಲೈಮ್ಯಾಕ್ಸ್ ಚಿತ್ರೀಕರಣವೂ ಕಳೆದ ಡಿಸೆಂಬರ್‌ನಲ್ಲಿ ಹೈ ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಹೈದರಾಬಾದಿನಲ್ಲಿ ಮಾಡಿ ಮುಗಿಸಲಾಯಿತು. 'ಕೆಜಿಎಫ್: ಅಧ್ಯಾಯ 2' 2022 ಏಪ್ರಿಲ್ 14 ರಂದು ತೆರೆಗೆ ಅಪ್ಪಳಿಸಲಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net