'ಗಂಧದ ಗುಡಿ' ಟೀಸರ್​​ಗೆ 25 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ! 'ಅಪ್ಪು' ಕನಸನ್ನು ನೋಡಿ ಕಣ್ಣೀರಿಡುತ್ತಿದ್ದಾರೆ ಅಭಿಮಾನಿಗಳು!

Published on

ಬೆಂಗಳೂರು: ಇದುವರೆಗೆ, ಡಿಸೆಂಬರ್ 6 ರಿಂದ 'ಗಂಧದ ಗುಡಿ' ಚಿತ್ರದ ಮೊದಲ ಟೈಟಲ್ ಟೀಸರ್ ಬಗ್ಗೆ ಮಾತ್ರ ಎಲ್ಲೆಡೆ ಚರ್ಚಿಸಲಾಗುತ್ತಿದೆ. 'ಗಂಧದ ಗುಡಿ' ಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಜೀವನದ ಸಂಪೂರ್ಣ ವೈಭವವನ್ನು ಒಳಗೊಂಡಿರುತ್ತದೆ ಮತ್ತು ಸಿನಿಮಾದ ನಿರ್ದೇಶಕ ಅಮೋಘವರ್ಷ ಜೆ.ಎಸ್. ಜೊತೆ ಅಪ್ಪು ಕರ್ನಾಟಕ ರಾಜ್ಯದ ರಹಸ್ಯಗಳು ಮತ್ತು ಸೌಂದರ್ಯವನ್ನು ಈ ಸಿನಿಮಾದಲ್ಲಿ ತಮ್ಮ ಸಾಹಸದ ಮೂಲಕ ತೋರಿಸಲಿದ್ದಾರೆ. ನಮ್ಮ ರಾಜ್ಯದ ಸಮುದ್ರ ಜೀವಿಗಳು ಮತ್ತು ಇತರ ನೈಸರ್ಗಿಕ ಆವಾಸಸ್ಥಾನಗಳ ಮೇಲೆ ವ್ಯಾಪಕವಾದ ಗಮನವನ್ನು ಹೊಂದಿರುವ ಪುನೀತ್ ಮತ್ತು ಅವರ ಪ್ರಯಾಣದ ಪ್ರತ್ಯಕ್ಷ ವಿವರವನ್ನು ಪ್ರಸ್ತುತಪಡಿಸುವ ಮೂಲಕ, 'ಗಂಧದ ಗುಡಿ' ಪ್ರೀತಿಯ ಪವರ್‌ಸ್ಟಾರ್ ಅವರ ಎಲ್ಲಾ ಅಭಿಮಾನಿಗಳಿಗೆ ಸಂತಸ ನೀಡುತ್ತಾ ಭಾವುಕರನ್ನಾಗಿಸುತ್ತೆ ಎನ್ನುವುದರಲ್ಲಿ ಎರಡನೇ ಮಾತೆ ಇಲ್ಲ. ಅಂತಹ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾದ 12 ಗಂಟೆ ಒಳಗೆ 2 ಮಿಲಿಯನ್​​ಗೂ ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ.


ಇನ್ನು, ಈಗಲೂ ವೈರಲ್ ಆಗುತ್ತಿರುವ 1.20 ಸೆಕೆಂಡ್ 'ಗಂಧದ ಗುಡಿ' ಟೈಟಲ್ ಟೀಸರ್ 25 ಗಂಟೆಗಳ ಒಳಗೆ 3 ಮಿಲಿಯನ್​​ಗೂ ಹೆಚ್ಚು ವೀಕ್ಷಣೆಗಳನ್ನು ಸಹ ಪಡೆದಿದೆ. ಜೊತೆಗೆ, ಪಿಆರ್​​ಕೆ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾದ ಈ ಟೀಸರ್ ಪ್ರತಿ ಗಂಟೆ ಗಂಟೆಗೂ ವೈರಲ್ ಆಗುತ್ತಾ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆಯುತ್ತಿದೆ. ಅದೇ ಧಾಟಿಯಲ್ಲಿ, ನಟ ಪುನೀತ್ ರಾಜ್‌ಕುಮಾರ್ ಅವರ ಅನೇಕ ಆತ್ಮೀಯ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಚಲನಚಿತ್ರದ ಟೈಟಲ್ ಟೀಸರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳಿಗೆ ನೋಡಲು ವಿನಂತಿಸುತ್ತಿದ್ದಾರೆ. ಈ ರೀತಿ ಪುನೀತ್ ಅವರ ಹಿರಿಯ ಸಹೋದರ ಮತ್ತು ಸಹ ನಟ ಶಿವ ರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ಟೀಸರ್‌ ಲಿಂಕ್ ಅನ್ನು ಹಂಚಿಕೊಂಡವರಲ್ಲಿ ಮೊದಲಿಗರು ಎಂದೇ ಹೇಳಬೇಕು.

ಪುನೀತ್ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾಗಿರುವ 'ಕೆಜಿಎಫ್: ಅಧ್ಯಾಯ 2' ಸ್ಟಾರ್ ನಟ ಯಶ್, "ಪುನೀತ್ ಈ ಯೋಜನೆಯ ಬಗ್ಗೆ ಮಾತನಾಡುವಾಗಲೆಲ್ಲಾ ಅವರ ಕಣ್ಣುಗಳಲ್ಲಿ ಇದ್ದ ಮಿನುಗು ನನಗೆ ನೆನಪಿದೆ. ಈ ಚಿತ್ರದ ಬಗ್ಗೆ ಅವರು ಹೊಂದಿದ್ದ ಉತ್ಸಾಹವು ಸಿನಿಮಾದಲ್ಲಿ ಕಾಣಿಸುತ್ತದೆ. 'ಗಂಧದ ಗುಡಿ' ಅಪ್ಪು ಅವರ ಹೃದಯಕ್ಕೆ ಹತ್ತಿರವಾಗಿತ್ತು. ನಮ್ಮ ಗಂಧದಗುಡಿಯನ್ನು ಅವರ ಕಣ್ಣುಗಳ ಮೂಲಕ ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಪ್ಪು ಸರ್. ಇದು ನಿಜವಾಗಿಯೂ ಸ್ವರ್ಗ", ಎಂದು ಪೋಸ್ಟ್ ಮಾಡಿ ಭಾವುಕರಾದರು. ಇನ್ನು, ನಮ್ಮ ರಾಜ್ಯದ ಸಿಎಂ ಸೇರಿದಂತೆ ಹಲವು ನಟ ಮತ್ತು ನಟಿಯರು ಸಹ ಟೈಟಲ್ ಟೀಸರ್ ಹಂಚಿಕೊಂಡು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ತಾಯಿ ಪಾರ್ವತಮ್ಮ ರಾಜ್​​ಕುಮಾರ್ ಹುಟ್ಟುಹಬ್ಬದಂದೇ ರಿಲೀಸ್ ಆದ 'ಗಂಧದ ಗುಡಿ' ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್ ನೋಡಿದ ಅಪ್ಪು ಅಭಿಮಾನಿಗಳು ಕೂಡ ಪುನೀತ್ ಬದುಕಿರಬೇಕಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net