'ಕವಡೆ' ಆಟ ಆಡಲು 'ಜಾಡಘಟ್ಟ' ರಘು ಸಿದ್ಧ

Kavade 1
Published on

ಬೆಂಗಳೂರು: ಫೆಭ್ರವರಿಯಲ್ಲಿ 'ಜಾಡಘಟ್ಟ' ಎಂಬ ಚಿತ್ರ ಬಿಡಗುಡೆಯಾಗಿದ್ದು, ರಘು ಎನ್ನುವವರು ನಾಯಕನಾಗಿ ನಟಿಸಿ, ನಿರ್ದೇಶಿಸಿದ ಈ ಚಿತ್ರವು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಅದೇ ರಘು, 'ಕವಡೆ' ಎಂಬ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ. ಈ ಚಿತ್ರಕ್ಕೂ ಅವರೇ ನಾಯಕ ಕಂ ನಿರ್ಮಾಪಕ.

ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸರ್ಮಾರಂಭದಲ್ಲಿ ಲಕ್ಷ್ಮೀಕಾಂತ್ ಅವರು ಪ್ರಥಮ ಸನ್ನಿವೇಶಕ್ಕೆ ಆರಂಭಫಲಕ ತೋರಿದರೆ, ಲಕ್ಷ್ಮೀಪತಿ ಕ್ಯಾಮೆರಾ ಚಾಲನೆ ಮಾಡಿದರು. ಮಿಕ್ಕಂತೆ, ಚಿತ್ರತಂಡದವರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾಯಕ ಹಾಗೂ ನಾಯಕಿ ನಡುವೆ ಮೂರನೇ ವ್ಯಕ್ತಿಯ ಆಗಮನವಾಗುತ್ತದೆ. ಆಗ ಏನಾಗುತ್ತದೆ? ಎಂಬುದೇ ಕಥಾಹಂದರ. ಈ ಜೀವನ ಕೂಡ ಒಂದು ಚದುರಂಗದ ಆಟ. ಹಾಗಾಗಿ ನಮ್ಮ ಚಿತ್ರಕ್ಕೆ 'ಕವಡೆ' ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ರಘು.

ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ವಿದ್ಯಾ ಎಂಬ ಹೊಸ ನಟಿ ನಟಿಸುತ್ತಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರತಿಭಾವಂತರು ಪ್ರದರ್ಶನ ನೀಡುತ್ತಿರುತ್ತಾರೆ. ಆದರೆ, ಅವರಿಗೆ ಅವಕಾಶ ಸಿಗುವುದು ಕಡಿಮೆ.‌ ನಾವು ಅಂತಹ ಪ್ರತಿಭೆಗೆ ಅವಕಾಶ ನೀಡಲು ನಿಶ್ಚಯಿಸಿ ಈ ಚಿತ್ರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಿರುವುದಾಗಿ' ರಘು ತಿಳಿಸಿದರು.

ಶಶಿಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಶಿಮಣಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ 'ಜಾಡಘಟ್ಟ' ಚಿತ್ರವನ್ನು ಸಹ ಅವರೇ ನಿರ್ಮಿಸಿದ್ದರು. ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ನಡೆಯಲಿದ್ದು, ಅಭಿಷೇಕ್ ಜಿ ರಾಯ್ ಸಂಗೀತ ಸಂಯೋಜಿಸಿದರೆ, ಪ್ರದೀಪ್ ಜೈನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net