

ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಮಗ ಧ್ರುವ ಅಭಿನಯದ ಮೊದಲ ಚಿತ್ರ ಆದಿತ್ಯ ವರ್ಮಾ ಕಳೆದ ವರ್ಷವಷ್ಟೇ ಬಿಡುಗಡೆಯಾಗಿತ್ತು. ತೆಲುಗಿನ ಅರ್ಜುನ್ ರೆಡ್ಡಿ ರೀಮೇಕ್ ಆಗಿದ್ದ ಆದಿತ್ಯ ವರ್ಮಾ ಚಿತ್ರದಲ್ಲಿನ ಅಭಿನಯಕ್ಕೆ ಧ್ರುವ ಅವರಿಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿತ್ತು. ಆದರೆ, ಚಿತ್ರ ಸೂಪರ್ ಹಿಟ್ ಏನೂ ಆಗಲಿಲ್ಲ.
ಎಲ್ಲಾ ಸರಿ, ಧ್ರುವ ಅಭಿನಯದ ಎರಡನೆಯ ಚಿತ್ರ ಯಾವುದು ಎಂಬುದು ಎಲ್ಲರಿಗೂ ಇದ್ದೇ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಧ್ರುವ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ಇದರಲ್ಲಿ ವಿಕ್ರಮ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಪ್ಪ-ಮಗ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸಿದಂತಾಗುತ್ತದೆ.
ಸದ್ಯಕ್ಕೆ ಈ ಚಿತ್ರದ ಹೆಸರೇನು ಎಂಬುದನ್ನು ಕಾರ್ತಿಕ್ ಸುಬ್ಬರಾಜ್ ಹೇಳಿಲ್ಲ. ಅವರಿಗೇ ಇನ್ನೂ ಪಕ್ಕಾ ಆಗಿಲ್ಲವೋ ಅಥವಾ ಈಗಲೇ ಹೇಳುವುದು ಬೇಡ ಎಂಬ ಕಾರಣಕ್ಕೋ, ಒಟ್ಟಾರೆ ಚಿತ್ರಕ್ಕೆ ಚಿಯಾನ್ 60 ಎಂಬ ವರ್ಕಿಂಗ್ ಟೈಟಲ್ ಇಟ್ಟು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಜಗಮೇ ತಂದಿರಮ್ ನಂತರ ನನ್ನ ಹೊಸ ಚಿತ್ರ ಚಿಯಾನ್ 60 ಆಗಲಿದೆ ಎಂದು ಟ್ವಿಟರ್ನಲ್ಲಿ ಪೋಸ್ಟರ್ ಬಿಡುಗಡೆ ಮಾಡುವುದರ ಜತೆಗೆ ಘೋಷಿಸಿದ್ದಾರೆ.
ಚಿಯಾನ್ 60 ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋ ನಿಮಿಧಸುತ್ತಿದ್ದು, ಕಾಲಿವುಡ್ನ ಸದ್ಯದ ಮೋಸ್ಟ್ ವಾಂಟೆಡ್ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ, ತೆರೆಯ ಹಿಂದೆ ಯಾರೆಲ್ಲಾ ಕೆಲಸ ಮಾಡಲಿದ್ದಾರೆ, ಕಥೆ ಏನು ... ಮುಂತಾದ ಯಾವ ವಿಷಯವನ್ನೂ ಕಾರ್ತಿಕ್ ಸುಬ್ಬರಾಜ್ ಬಿಟ್ಟುಕೊಟ್ಟಿಲ್ಲ. ಎಲ್ಲಾ ಮುಂದಿನಗಳಲ್ಲಿ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.
ಇದನ್ನೂ ಓದಿ: ಚಿರು ಆ್ಯಕ್ಟ್ ಮಾಡದ ಚಿತ್ರದ ಟ್ರೇಲರ್ ಬಿಡುಗಡೆ!
ಕಳೆದ ವರ್ಷ ಬಿಡುಗಡೆಯಾದ ಕಾದರಮ್ ಕೊಂಡಾನ್ ಚಿತ್ರದ ನಂತರ ವಿಕ್ರಮ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ವಿಕ್ರಮ್ ತಾವೊಬ್ಬರೇ ಅಲ್ಲ, ಮಗನನ್ನೂ ಜತೆಗೆ ಕರೆದುಕೊಂಡು ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದ್ದಾರೆ. ಈ ಅಪ್ಪ-ಮಗನ ಕಾಂಬಿನೇಷನ್ ಹೇಗಿರುತ್ತದೋ ಎಂದು ಅಭಿಮಾನಿಗಳಿಗೆ ಈಗಲೇ ಟೆನ್ಷನ್ ಶುರುವಾಗಿದೆ. ಮುಂದೇನೋ?