

ಬೆಂಗಳೂರು: ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಚಲನಚಿತ್ರಮಂದಿರಗಳಿಗೆ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡುವುದರ ಜತೆಗೆ ಆರ್ಥಿಕ ನೆರವು ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಚಿತ್ರಮಂದಿರದವರ ಹಲವು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಕೋರಿದ್ದಾರೆ.
2020ನೇ ಸಾಲಿನಲ್ಲಿ ಕರೊನಾದಿಂದಾಗಿ ಎಂಟು ತಿಂಗಳ ಕಾಲ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿತ್ತು. ಸರ್ಕಾರದ ನಿರ್ದೇnದಂತೆ ಈಗಲೂ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಬಾರಿ ಲಾಕ್ಡೌನ್ನಿಂದ ಚಿತ್ರಪದರ್ಶನ ನಿಲ್ಲಿಸಿದ್ದರಿಂದ ಸಾಕಷ್ಟು ಸಮಸ್ಯೆಗಳಾಗಿವೆ ಮತ್ತು ಈ ವಿಷಯವನ್ನು ತಮಗೆ, ಉಪಮುಖ್ಯಮಂತ್ರಿ ಅಶ್ವಥ್ನಾರಾಯಣ್ ಮತ್ತು ವಾರ್ತಾ ಸಚಿವರಾದ ಸಿ.ಸಿ. ಪಾಟೀಲ್ ಅವರ ಗಮನಕ್ಕೂ ತರಲಾಗಿದೆ. ಮಾಸಿಕ ವಿದ್ಯುತ್ ಮತ್ತು ನೀರಿನ ಶುಲ್ಕ, ಆಸ್ತಿ ತೆರಿಗೆ ರಿಯಾಯಿತಿ, ಕಾರ್ಮಿಕರಿಗೆ ಧನಸಹಾಯ, ಚಿತ್ರರಂಗವನ್ನು ಕೈಗಾರಿಕಾ ವಲಯ ಎಂದು ಘೋಷಣೆ ಮಾಡುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದ್ದು, ಈ ಕುರಿತು ಪರಿಹಾರ ನೀಡಬೇಕಾಗಿ ಕೋರುತ್ತೇವೆ ಎಂದು ತಮ್ಮ ಮನವಿ ಪತ್ರದಲ್ಲಿ ಚಂದ್ರಶೇಖರ್ ಕೇಳಿಕೊಂಡಿದ್ದಾರೆ.
ಸರ್ಕಾರವೇ ಚಿತ್ರಪ್ರದರ್ಶನ ಸ್ಥಗಿತಗೊಳಿಸಿರುವುದರಿಂದ, ರಾಜ್ಯದ ಎಲ್ಲ ಚಿತ್ರಮಂದಿರಗಳ ಆಸ್ತಿ ತೆರಿಗೆ ರಿಯಾಯ್ತಿಯನ್ನು ನೀಡಬೇಕು ಎಂದು ಚಂದ್ರಶೇಖರ್ ಇದೇ ಸಂದರ್ಭದಲ್ಲಿ ಕೇಳಿದ್ದಾರೆ. ಪ್ರಸ್ತುತ ರಾಜ್ಯದ ಎಲ್ಲ ಚಿತ್ರಮಂದಿರದವರು ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಶಕ್ತರಲ್ಲದ ಕಾರಣ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವುದರಿಂದ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ರಿಯಾಯ್ತಿಯನ್ನು ಕೊಡಬೇಕು ಎಂದು ಚಂದ್ರಶೇಖರ್ ಮನವಿ ಮಾಡಿದ್ದಾರೆ.