

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿಯಾಗಿವೆ. ನೈಜ ಕಥೆ ಅಂದರೆ ಪ್ರೇಕ್ಷಕರಿಗೂ ಒಂದು ರೀತಿಯ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಚಂದನವನದಲ್ಲಿ ಸದ್ದಿಲ್ಲದೇ ಸಿನಿಮಾವೊಂದು ರೆಡಿಯಾಗಿದೆ. ಆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನಸೆಳೆಯುತ್ತಿದೆ.
ಅಂದಹಾಗೆ, ಆ ಚಿತ್ರದ ಹೆಸರು 'ಕಾರ್ಗಲ್ ನೈಟ್ಸ್'. ಸಿನಿಮಾ ನಿರ್ದೇಶಿಸಿರುವವರು ದೇವರಾಜ್ ಪೂಜಾರಿ. ಸಿನಿಮಾದ ಹೆಸರು ಹೇಗೆ ವಿಭಿನ್ನವಾಗಿದೆಯೋ, ಸಿನಿಮಾ ಕೂಡಾ ಕುತೂಹಲಕಾರಿ ಆಗಿರಲಿದೆ ಮತ್ತು ಹೊಸ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳುತ್ತದೆ.
19ನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ 'ಕಾರ್ಗಲ್ ನೈಟ್ಸ್' ಚಿತ್ರವನ್ನು ತೆರೆ ಮೇಲೆ ತರುತ್ತಿದೆ.
ಚಿತ್ರದಲ್ಲಿ ಪಶ್ಚಿಮ ಘಟ್ಟದ ಭೂಗತ ಲೋಕದ ಅನಾವರಣಗೊಳ್ಳಲಿದ್ದು, ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್ ಸೇರಿದಂತೆ ಸಾಕಷ್ಟು ಹೊಸಬರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರೋಶನ್ ಲೋಕೇಶ್ ಅವರ ಸಂಕಲನವಿದ್ದು, ಸುರೇಂದ್ರ ನಾಥ್ ಬಿ.ಆರ್. ಸಂಗೀತ ಸಂಯೋಜಿಸಿದ್ದಾರೆ.
ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ಟ್ರೈಲರ್, ಯೂಟ್ಯೂಬ್ ಚಾನಲ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿದೆ.