ಆಸ್ಕರ್​ಗಿಲ್ಲ ಸರ್ದಾರ್ ಉಧಮ್; ಸ್ಪರ್ಧೆಯಿಂದ ಕೈಬಿಟ್ಟಿದ್ದಕ್ಕೆ ಆಯ್ಕೆ ಸಮಿತಿಗೆ ತರಾಟೆ

Oscar
Published on

2022ರ ಮಾರ್ಚ್​ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದಿಂದ ಪ್ರತಿನಿಧಿಸಲು, ಈ ಬಾರಿ ಒಟ್ಟು 14 ಚಿತ್ರಗಳು ಪೈಪೋಟಿ ನಡೆಸಿದ್ದವು. ಈ ಪೈಕಿ ಶಾಜಿ ಕರುಣ್ ನೇತೃತ್ವದ 15 ಜನರ ಆಯ್ಕೆ ಸಮಿತಿಯು, ಅಂತಿಮವಾಗಿ ‘ಕೂಳಂಗಳ್’ಚಿತ್ರವನ್ನು ಆಯ್ಕೆ ಮಾಡಿದೆ. ‘ಕೂಳಂಗಳ್’ ಆಯ್ಕೆಯಾಗಿರುವ ಬಗ್ಗೆ ಯಾವುದೇ ತಕರಾರುಗಳಿರದಿದ್ದರೂ, ‘ಸರ್ದಾರ್ ಉಧಮ್ ಚಿತ್ರವನ್ನು ಕೈಬಿಟ್ಟಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೇಸರ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಆಯ್ಕೆ ಸಮಿತಿಯು ಚಿತ್ರವನ್ನು ಕೈಬಿಡುವುದಕ್ಕೆ ನೀಡಿರುವ ಕಾರಣ. ‘ಸರ್ದಾರ್ ಉಧಮ್ ಚಿತ್ರವು ಬ್ರಿಟಿಷರ ವಿರುದ್ಧ ದ್ವೇಷ ಬಿಂಬಿಸುತ್ತದೆ ಎಂಬ ಕಾರಣಕ್ಕೆ ಆಸ್ಕರ್ ಕಣದಿಂದ ಕೈಬಿಡಲಾಗಿದೆ ಎಂದು ಆಯ್ಕೆ ಸಮಿತಿಯು ಹೇಳಿಕೊಂಡಿದೆ. ಈ ಕುರಿತು ಸಾಕಷ್ಟು ನೆಟ್ಟಿಗರು ಆಯ್ಕೆ ಸಮಿತಿಯ ಸದಸ್ಯರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ‘ಸ್ಲಂಡಾಗ್ ಮಿಲಿಯನೇರ್’ನಲ್ಲಿ ಭಾರತವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುವುದಕ್ಕೆ ಪ್ರಯತ್ನ ಮಾಡಿದರೂ ಅದನ್ನು ಆಯ್ಕೆ ಮಾಡಿ, ಉಧಮ್ ಸಿಂಗ್​ನಂತಹ ಒಬ್ಬ ದೇಶಭಕ್ತನೊಬ್ಬನ ಕಥೆಯನ್ನು ಬಿಟ್ಟಿರುವುದು ಎಷ್ಟು ಸೂಕ್ತ ಎಂದು ಹಲವರು ಪ್ರಶ್ನಿಸಿದ್ದಾರೆ. ಬ್ರಿಟಿಷರು ಭಾರತೀಯರ ಮೇಲೆ ಎಸಗಿದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವುದನ್ನು ದ್ವೇಷ ಬಿಂಬಿಸಿದಂತಾಗುತ್ತದೆ ಎನ್ನುವುದು ಎಷ್ಟು ಸರಿ ಎಂಬುದನ್ನು ಕೆಲವರು ಕೇಳಿದರೆ, ಭಗತ್ ಸಿಂಗ್ ಮತ್ತು ಉಧಮ್ ಸಿಂಗ್ ಜೀವನವನ್ನಾಧರಿಸಿದ ಚಿತ್ರಗಳಲ್ಲಿ ಬ್ರಿಟಿಷರ ಕುರಿತು ಸೋದರತ್ವದ ಬಗ್ಗೆ ಎಲ್ಲಾದರೂ ತೋರಿಸುವುದಕ್ಕೆ ಸಾಧ್ಯವೇ? ಎಂದು ಹಲವರು ಕೇಳಿದ್ದಾರೆ. ಒಟ್ಟಾರೆ, ಆಯ್ಕೆಸಮಿತಿಯು ಚಿತ್ರವನ್ನು ನಿರಾಕರಿಸಿರುವುದಕ್ಕೆ ನೀಡಿರುವ ಕಾರಣದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ಸಮಿತಿ ಮಾತ್ರ ಭಾರತದ ಪ್ರತಿನಿಧಿಯಾಗಿ ‘ಕೂಳಂಗಳ್’ ಚಿತ್ರವನ್ನು ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net