

ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಬಾಲಿವುಡ್ನ ಒಂದು ವರ್ಗ ಮತ್ತು ಸುಶಾಂತ್ ಅಭಿಮಾನಿಗಳು, ಕರಣ್ ಜೋಹರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರಣ್ ಸ್ವಜನಪಕ್ಷಪಾತ ಮಾಡುತ್ತಿರುವುದರಿಂದ ಸುಶಾಂತ್ರಂತಹವರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಮತ್ತು ಅದೇ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಶಾಂತ್ ನಿಧನರಾಗಿ ಮೂರು ವಾರಗಳಾದರೂ, ಈ ಟ್ರೋಲ್ಗಳು ಮುಂದುವರೆದಿದ್ದು, ಇದರಿಂದ ಕರಣ್ ಜೋಹರ್ ನಿಜಕ್ಕೂ ಕುಗ್ಗಿ ಹೋಗಿದ್ದಾರೆ ಎಂದು ಅವರ ಆಪ್ತರು ಇತ್ತೀಚೆಗೆ ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮುಂದಿನ ವಾರದಿಂದ ‘ಫ್ಯಾಂಟಮ್’ ಚಿತ್ರೀಕರಣ ಶುರು!
ಕರಣ್ ಯಾವತ್ತೂ ವಿಮರ್ಶೆ ಮತ್ತು ಟೀಕೆಗಳಿಗೆ ಹೆದರಿಲ್ಲ. ವೃತ್ತಿಜೀವನದ ಆರಂಭದಿಂದಲೂ ಅವರು ಸಾಕಷ್ಟು ಟೀಕೆಗಳನ್ನು ಕೇಳಿದ್ದು, ಅದನ್ನೆಲ್ಲಾ ಬಹಳ ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದರು. ಆದರೆ, ಈ ಬಾರಿ ಅವರು ಸಹ ವಿಚಲಿತರಾಗಿದ್ದಾರೆ. ಒಂದು ಕಡೆ ಬೆಂಬಿಡದ ಆರೋಪ, ಇನ್ನೊಂದು ಕಡೆ ತಮ್ಮ ಬೆಂಬಲಕ್ಕೆ ಯಾರೂ ನಿಲ್ಲದಿರುವುದು ಕರಣ್ ಜೋಹರ್ ಅವರ ನಿದ್ದೆಗೆಡಿಸಿದ್ದು, ಕೆಲವು ದಿನಗಳ ಹಿಂದೆಯೇ ಮಾಮಿ (ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜಸ್) ಚಿತ್ರೋತ್ಸವದ ಮಂಡಳಿಗೆ ರಾಜಿನಾಮೆ ನೀಡಿದ್ದರು.
ನಂತರದ ದಿನಗಳಲ್ಲಿ ತಮ್ಮ ವಿರುದ್ಧ ಜನಸಾಮಾನ್ಯರ ವಲಯದಲ್ಲಿ ಹೆಚ್ಚುತ್ತಿರುವ ಆಕ್ರೋಶದ ಕುರಿತು ಕರಣ್ ಇನ್ನಷ್ಟು ವಿಚಲಿತರಾಗಿದ್ದಾರಂತೆ. ಇದರಿಂದ ಅವರ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರಿದೆಯಂತೆ. ಕರಣ್ ಅಷ್ಟೊಂದು ಕುಗ್ಗಿರುವುದಕ್ಕೆ ಕಾರಣ, ಅವರ ಮೂರು ವರ್ಷದ ಅವಳಿ ಮಕ್ಕಳ ಬಗ್ಗೆ ಜನ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವುದು. ಕೆಲವರು ಆ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿರುವುದು ನಿಜಕ್ಕೂ ಕರಣ್ ನಿದ್ದೆಗೆಡಿಸಿದೆ.
ಇದನ್ನೂ ಓದಿ: ಪ್ರಭಾಸ್ಗೆ ಸಿಕ್ತು ಹೊಸ ಬಿರುದು … ಏನಿರಬಹುದು ಹೇಳಿ?
ಅಷ್ಟೇ ಅಲ್ಲ, ಅನನ್ಯ ಪಾಂಡೆಯಂತಹ ಹೊಸ ಹುಡುಗಿ ಸಹ ತನ್ನಿಂದಾಗಿ ಜನರ ದೃಷ್ಟಿಯಲ್ಲಿ ಕೆಟ್ಟವರಾಗುತ್ತಿರುವ ಬಗ್ಗೆ ಕರಣ್ಗೆ ಬಹಳ ನೋವಾಗಿದೆಯಂತೆ. ಸುಶಾಂತ್ ಸಾವಿಗೆ ಬದಲಿಯಾಗಿ, ಆತ್ಮಹತ್ಯೆ ಮಾಡಿಕೋ ಎಂದು ಅನನ್ಯಗೆ ಕೆಲವರು ನೆಟ್ಟಿಗರು ಹೇಳಿದ್ದನ್ನು ನೋಡಿ ಕರಣ್ ಬಹಳ ಬೇಸರಗೊಂಡಿದ್ದಾರೆ ಎಂದು ಕರಣ್ ಅವರ ಆಪ್ತರು ಹೇಳಿಕೊಂಡಿದ್ದಾರೆ.
ಈ ಕುರಿತು ಕರಣ್ ಯಾಕೆ ಮಾತಾಡುತ್ತಿಲ್ಲ ಅಥವಾ ಸ್ಪಷ್ಟನೆ ನೀಡುತ್ತಿಲ್ಲ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಸದ್ಯಕ್ಕೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಮತ್ತು ಇನ್ನಷ್ಟು ಟ್ರೋಲ್ ಆಗುವ ಭಯದಲ್ಲಿ ಕರಣ್, ಸೋಷಿಯಲ್ ಮೀಡಿಯಾ ಅಥವಾ ಸ್ಪಷ್ಟೀಕರಣ ಕೊಡುವುದರಿಂದ ದೂರವೇ ಉಳಿದಿದ್ದಾರಂತೆ. ಇವೆಲ್ಲವೂ ಸ್ವಲ್ಪ ತಿಳಿಯಾದ ಮೇಲೆ ಕರಣ್ ಮುಂದೆ ಬಂದು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.