

ಮುಂಬೈ: ಕಳೆದ ವರ್ಷ ಜುಲೈ 28ರಂದು ಕರಣ್ ಜೋಹರ್ ನೀಡಿದ ಪಾರ್ಟಿಯಲ್ಲಿ ಬಾಲಿವುಡ್ ನಟ-ನಟಿಯರಾದ ದೀಪಿಕಾ ಪಡುಕೋಣೆ, ವಿಕ್ಕಿ ಕೌಶಾಲ್, ರಣಬೀರ್ ಕಪೂರ್, ವರುಣ್ ಧವನ್, ಮಲೈಕಾ ಅರೋರಾ ಸೇರಿದಂತೆ ಹಲವರು ಡ್ರಗ್ಸ್ ತೆಗೆದುಕೊಂಡಿದ್ದರು ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇದೆ. ಅಷ್ಟೇ ಅಲ್ಲ, ಈ ಪಾರ್ಟಿಯ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಸಾಕಷ್ಟು ವೈರಲ್ ಸಹ ಆಗಿದೆ.
ಕರಣ್ ಜೋಹರ್ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜಾಗಿದೆ ಎಂಬ ವಿಷಯ ಸಾಕಷ್ಟು ಸುದ್ದಿಯಾಗಿದ್ದರೂ, ಕರಣ್ ಜೋಹರ್ ಮಾತ್ರ ಈ ವಿಷಯವಾಗಿ ಯಾವುದೇ ಒಂದು ಮಾತನಾಡಿರಲಿಲ್ಲ. ಸ್ಪಷ್ಟೀಕರಣ ಕೊಡುವುದಕ್ಕೆ ಹೋಗಿರಲಿಲ್ಲ. ಈಗ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಇಷ್ಟುದ್ದದ ಪತ್ರವನ್ನು ಅವರು ಬರೆದುಕೊಂಡಿದ್ದಾರೆ.
ಕರಣ್ ಹೇಳುವಂತೆ ಅವರು ಕಳೆದ ವರ್ಷವೇ ಈ ಬಗ್ಗೆ ಮಾತನಾಡಿದ್ದರಂತೆ. ತಮ್ಮ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜಾಗಿಲ್ಲ ಎಂದು ಹೇಳಿದ್ದರಂತೆ. ಆದರೂ ಕೆಲವು ಮಾಧ್ಯಮಗಳಲ್ಲಿ ಹಳೆಯ ವಿಡಿಯೋವೊಂದನ್ನು ಹಾಕಿ ತಮ್ಮ ಮಾನ ಹರಾಜು ಹಾಕುತ್ತಿವೆ ಎಂದು ಕರಣ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಎನ್ನುವುದರ ಜತೆಗೆ, ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜಾಗಿಲ್ಲ ಎಂದು ಪುನರುಚ್ಛರಿಸಿದ್ದಾರೆ.
'ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಪ್ರಸಾರಾಗುತ್ತಿರುವುದರಿಂದ ನನ್ನ ಬಗ್ಗೆ, ನನ್ನ ಪ್ರೊಡಕ್ಷನ್ ಕಂಪೆನಿಯ ಬಗ್ಗೆ ಜನರಲ್ಲಿ ಅಸಹನೆ ಹೆಚ್ಚುತ್ತಿದೆ. ಈ ಕುರಿತಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದಕ್ಕೆ ಬಯಸುತ್ತೇನೆ. ನಾನು ಯಾವತ್ತೂ ಡ್ರಗ್ಸ್ ತೆಗೆದುಕೊಂಡಿಲ್ಲ ಮತ್ತು ಡ್ರಗ್ಸ್ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದೂ ಇಲ್ಲ' ಎಂದು ಅವರು ಹೇಳಿದ್ದಾರೆ.
ಇನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಷಿತಿಜ್ ಪ್ರಸಾದ್ ಮತ್ತು ಅನುಭವ್ ಚೋಪ್ರಾ ಅವರು ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವ ವಿಷಯದ ಕುರಿತು ಮಾತನಾಡಿರುವ ಅವರು, ತಮ್ಮ ಸಂಸ್ಥೆಗೂ ಮತ್ತು ಅವರಿಬ್ಬರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆಯೇ ಅವರಿಬ್ಬರೂ ತಮ್ಮ ಸಂಸ್ಥೆಯನ್ನು ಬಿಟ್ಟು ಹೋಗಿದ್ದು, ಆ ನಂತರ ಅವರೇನೇ ಮಾಡಿದರೂ ಸಂಸ್ಥೆ ಅದಕ್ಕೆ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.