

ಬೆಂಗಳೂರು: 'ಅವನೇ ಶ್ರೀಮನ್ನಾರಾಯಣ' ನಂತರ ಶಾನ್ವಿ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಹಾಗೆಯೇ ಅವರ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈಗ ಅವರು ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಈ ಮಧ್ಯೆ, ಶಾನ್ವಿ ಮಾಡಿರುವ ಒಂದು ಕೆಲಸದಿಂದ ಟ್ವೀಟಿಗರು ಅವರನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಶಾನ್ವಿ ಏನು ಮಾಡಿದರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ಇದನ್ನೂ ಓದಿ: ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು?
ವಿಷಯ ಏನೆಂದರೆ, ಶಾನ್ವಿ ತಮ್ಮ ಮುಂದಿನ ಚಿತ್ರದ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಇಂಗ್ಲೀಷ್ನಲ್ಲಿ ಟ್ಚೀಟ್ ಮಾಡುತ್ತಿದ್ದ ಅವರು, ಮೊದಲ ಬಾರಿಗೆ ಕನ್ನಡದಲ್ಲಿ ಟ್ವೀಟ್ ಮಾಡಿರುವುದು ವಿಶೇಷ. ಅವರೇ ಕನ್ನಡ ಕಲಿತು ಬರೆಯುವ ಪ್ರಯತ್ನ ಮಾಡಿದರೋ ಅಥವಾ ಯಾರೋ ಬರೆದುಕೊಟ್ಟಿದ್ದನ್ನು ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಶಾನ್ವಿ ಟ್ವೀಟ್ ಕನ್ನಡದಲ್ಲಿ ಇದೆ ಎನ್ನುವುದು ವಿಶೇಷ.
ಬರೀ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ. 'ನಿಮ್ಮ ಹಾಡುಗಳನ್ನು ಕೇಳಿ ಬೆಳೆದವರಲ್ಲಿ ನಾನೂ ಒಬ್ಬಳು' ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡುಗಳಿಂದ ಚಿರಂಜೀವಿಯಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದಿದ್ದಾರೆ.
ಶಾನ್ವಿ ಅವರ ಈ ಟ್ವೀಟ್ ಗಮನಿಸಿರುವ ಹಲವರು, ಅವರ ಇಂಥದ್ದೊಂದು ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. ಆಕೆಯ ಕನ್ನಡ ಅಭಿಮಾನಿಕ್ಕೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ.
ಅಂದಹಾಗೆ, 'ಕಸ್ತೂರಿ ಮಹಲ್' ಚಿತ್ರದ ಚಿತ್ರೀಕರಣವು ಅಕ್ಟೋಬರ್ ಐದರಿಂದ ಶುರುವಾಗಲಿದ್ದು, ಚಿತ್ರದಲ್ಲಿ ಶಾನ್ವಿ ಜತೆಗೆ ಸ್ಕಂದ, ಶ್ರುತಿ ಪ್ರಕಾಶ್ ಮುಂತಾದವರು ನಟಿಸುತ್ತಿದ್ದಾರೆ. ಇದೊಂದು ಪಾರಾನಾರ್ಮಲ್ ಚಿತ್ರವಾಗಿದ್ದು, ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.