

ಮುಂಬೈ: ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಇದುವರೆಗೂ ಅದೆಷ್ಟೇ ಚಿತ್ರಗಳನ್ನು ಮಾಡಿದರೂ, ಬಯೋಪಿಕ್ಗಳತ್ತ ಹೆಚ್ಚು ಗಮನಹರಿಸಿರಲಿಲ್ಲ. ಇದೀಗ ಅವರು, ಶಂಕರನ್ ನಾಯರ್ ಕುರಿತು ಒಂದು ಬಯೋಪಿಕ್ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಸ್ಟಿಲ್ & ಸ್ಟಿಲ್ ಮೀಡಿಯಾ ಜತೆಯಾಗಿ ನಿರ್ಮಿಸುತ್ತಿವೆ.
ಎಲ್ಲ ಸರಿ, ಈ ಶಂಕರನ್ ನಾಯರ್ ಯಾರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಜಲಯನ್ವಾಲಾ ಬಾಗ್ ಹತ್ಯಾಕಾಂಡ ವಿರುದ್ಧ ಸಮರ ಸಾರಿದ ವಕೀಲ ಅವರು. ಜಲಯನ್ವಾಲಾ ಬಾಗ್ನಲ್ಲಿ ಅಂದು ಏನೇನಾಯಿತು ಎಂದು ಎಳೆಎಳೆಯಾಗಿ ಬಿಡಿಸಿಟ್ಟು, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ, ಸತ್ಯಾಂಶವನ್ನು ಬಿಚ್ಚಿಟ್ಟವರು ಅವರು. ನಾಯರ್ ಅವರ ಸಾಹಸವು, ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು ಎಂದರೆ ತಪ್ಪಿಲ್ಲ.
ಈ ಚಿತ್ರವು ಇತಿಹಾಸದಲ್ಲಿನ ನೈಜ ಘಟನೆಗಳನ್ನಾಧರಿಸಿದ್ದು, 'ದಿ ಕೇಸ್ ದಟ್ ಶುಕ್ ದಿ ಎಂಪೈರ್' ಎಂಬ ಕೃತಿಯನ್ನಾಧರಿಸಿದೆ. ಶಂಕರನ್ ನಾಯರ್ ಅವರ ಮೊಮ್ಮಗ ರಘು ಮತ್ತು ಅವರ ಪತ್ನಿ ಪುಷ್ಪಾ ಪಾಲಟ್ ಜತೆಯಾಗಿ ರಚಿಸಿರುವ ಈ ಪುಸ್ತಕದಿಂದ ಹಲವು ಘಟನೆಗಳನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಕರಣ್ ಜೋಹರ್, 'ಶಂಕರನ್ ನಾಯರ್ ಎಂಬ ಐತಿಹಾಸಿಕ ಪುರುಷನ ಕುರಿತಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಹೆಮ್ಮೆ ಎಂದನಿಸುತ್ತಿದೆ. ಈ ಐತಿಹಾಸಿಕ ಚಿತ್ರವನ್ನು ಕರಣ್ ತ್ಯಾಗಿ ನಿರ್ದೇಶಿಸಲಿದ್ದು, ಸಿದ್ಧತೆಗಳು ಪ್ರಾರಂಭವಾಗಿವೆ. ಈ ಕುರಿತು ಸದ್ಯದಲ್ಲೇ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ' ಎಂದು ಕರಣ್ ಪೋಸ್ಟ್ ಹಾಕಿದ್ದಾರೆ.