

ಚೆನ್ನೈ: ಬಾಲಿವುಡ್ ನಟರೆಲ್ಲರೂ ಮುಂಬೈನಲ್ಲಿ ಕೋಟಿಕೋಟಿ ಮೌಲ್ಯದ ಮನೆಗಳನ್ನು ಖರೀದಿಸುತ್ತಿದ್ದಾರೆ. ತಮಿಳು ನಟ ಧನುಷ್ ಸಹ ಇದೀಗ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಆದರೆ, ಧನುಷ್ ಮನೆ ಖರೀದಿಸುತ್ತಿಲ್ಲ. ಬದಲಿಗೆ ಹೊಸ ಮನೆಯನ್ನು ಕಟ್ಟಿಸುವುದಕ್ಕೆ ಹೊರಟಿದ್ದಾರೆ.
ಧನುಷ್ ಇತ್ತೀಚೆಗೆ ಚೆನ್ನೈನ ಪೊಯೆಸ್ ಗಾರ್ಡನ್ ಪ್ರದೇಶದಲ್ಲಿ ಜಾಗ ಖರೀದಿಸಿದ್ದು, ಅಲ್ಲಿ ಮನೆ ಕಟ್ಟಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅದರ ಭೂಮಿಪೂಜೆ ಸಹ ಮುಗಿದಿದ್ದು, ಈ ಸಮಾರಂಭದಲ್ಲಿ ಅವರ ಮಾವ ರಜನಿಕಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು. ರಜನಿಕಾಂತ್ ಸಹ ಅದೇ ಪೊಯೆಸ್ ಗಾರ್ಡನ್ ಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಇದ್ದು, ಅವರ ಮನೆಯ ಸಮೀಪದಲ್ಲೇ ಧನುಷ್ ಸಹ ಮನೆ ಕಟ್ಟಿಸುತ್ತಿರುವುದು ವಿಶೇಷ.
ಅಂದಹಾಗೆ, 19 ಸಾವಿರ ಚದರಡಿ ಜಾಗದಲ್ಲಿ ಮನೆ ಕಟ್ಟಿಸುವುದಕ್ಕೆ ಧನುಷ್ ಮುಂದಾಗಿದ್ದಾರೆ. ನಾಲ್ಕಂತಸ್ತಿನ ಈ ಮನೆಯಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಹೋಮ್ ಥಿಯೇಟರ್ ಸೇರಿದಂತೆ ಎಲ್ಲ ಸೌಲಭ್ಯಗಳೂ ಇವೆಯಂತೆ. ತಮ್ಮ ಕನಸಿನ ಮನೆಗೆ ಧನುಷ್ ಖರ್ಚು ಮಾಡುತ್ತಿರುವ ಮೊತ್ತವೆಷ್ಟು ಗೊತ್ತಾ? ಬರೋಬ್ಬರಿ 150 ಕೋಟಿ ರೂ ಎಂದು ತಮಿಳು ಚಾನಲ್ವೊಂದು ವರದಿ ಮಾಡಿದೆ.
ಕಾಲಿವುಡ್ನ ಬ್ಯುಸಿ ನಟನಾಗಿರುವ ಧನುಷ್, ತಮಿಳಷ್ಟೇ ಅಲ್ಲ ಹಿಂದಿ, ಇಂಗ್ಲೀಷ್ ಸೇರಿದಂತೆ ಬೇರೆಬೇರೆ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಹೊಸ ಪ್ಯಾನ್ ಇಂಡಿಯಾದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಧನುಷ್, ಇದಲ್ಲದೆ ಹಿಂದಿಯ 'ಅತರಂಗಿ ರೇ' ಚಿತ್ರದಲ್ಲೂ ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಜತೆಗೆ ನಟಿಸುತ್ತಿದ್ದಾರೆ.