

ಬೆಂಗಳೂರು: ಕರೊನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಕನ್ನಡದ ಯಾವ ಸ್ಟಾರ್ ನಟ ಸಹ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷ ಹುಟ್ಟುಹಬ್ಬ ಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು, ಹುಟ್ಟುಹಬ್ಬ ಕ್ಯಾನ್ಸಲ್ ಮಾಡಿದ ಹಲವು ನಟರು ಸಿಗುತ್ತಾರೆ.
ಗಣೇಶ್ ಸಹ ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಸಹ ಹುಟ್ಟುಹಬ್ಬ ಬೇಡವೆಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಂಭ್ರಮಕ್ಕಿದು ಸಮಯವಲ್ಲ ಎಂದು ಹೇಳಿರುವ ಅವರು, ಕೇಕ್, ಹಾರ, ಉಡುಗೊರೆಗಳಿಗೆ ಹಣ ವ್ಯಯಿಸದೇ, ಅದೇ ಹಣವನ್ನು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಈ ಕುರಿತು ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲೊಂದು ಪತ್ರವನ್ನೂ ಬರೆದಿದ್ದಾರೆ.
'ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೋ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ, ಈ ವರ್ಷ ಕರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ಮಕ್ಕಿದು ಸರಿಹೊಂದುವ ಸಮಯವಲ್ಲವೆಂದರಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ, ಅದೇ ಖರ್ಚಿನ ಮೊತ್ತವನ್ನು ಕರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ' ಎಂದು ಗಣೇಶ್ ಹೇಳಿಕೊಂಡಿದ್ದಾರೆ.