ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಯ್ತು 'ಕಾಂತಾರ' ಚಿತ್ರದ ತುಳು ವರ್ಷನ್​

Kantara - Tulu
Published on

ಬೆಂಗಳೂರು: 'ಕಾಂತಾರ' ಚಿತ್ರದ ತುಳುವಿನಲ್ಲಿ ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಈಗಾಗಲೇ ತುಳು ಅವತರಣಿಕೆಯ ಟ್ರೈಲರ್​ ಸಹ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಚಿತ್ರವು ಡಿಸೆಂಬರ್​ 2ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ಗಳಲ್ಲಿ ಬಿಡುಗಡೆಯಾಗಿದೆ.

ಹೌದು, 'ಕಾಂತಾರ' ಚಿತ್ರದ ತುಳು ಅವತರಣಿಕೆಯು ಶುಕ್ರವಾರ (ನ.25) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಡ್ರೀಮ್ಸ್ ಸ್ಕ್ರೀನ್ಸ್​ ಇಂಟರ್​ನ್ಯಾಷನಲ್​ ಸಂಸ್ಥೆಯು ಬಿಡುಗಡೆ ಮಾಡಿದೆ.

'ಕಾಂತಾರ' ಚಿತ್ರದಲ್ಲಿ ದಕ್ಷಿಣ ಕನ್ನಡದ ಹಲವು ಆಚರಣೆಗಳು ಇವೆ ಎಂಬ ಸುದ್ದಿಯಾಗುತ್ತಿದ್ದಂತೆಯೇ, ಚಿತ್ರವನ್ನು ತುಳುವಿನಲ್ಲಿ ಡಬ್​ ಮಾಡುವುದಕ್ಕೆ ಬೇಡಿಕೆ ಇತ್ತು. ಆದರೆ, ಚಿತ್ರ ಆರಂಭವಾಗಿದ್ದು ಕನ್ನಡದಲ್ಲಾದ್ದರಿಂದ ಮೊದಲು ಕನ್ನಡದಲ್ಲಿ ಬಿಡುಗಡೆಯಾಯಿತು. ನಂತರ ಚಿತ್ರ ಯಶಸ್ವಿಯಾಗಿ, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್​ ಆಗಿ ಪ್ಯಾನ್​ ಇಂಡಿಯಾ ಚಿತ್ರವಾಯಿತು. ಬಹಳ ಒತ್ತಾಯದ ನಂತರ ಇದೀಗ ತುಳುಗೆ ಡಬ್​ ಆಗಿ ಚಿತ್ರ ಬಿಡುಗಡೆಯಾಗಿದೆ.

ತುಳು ರಂಗಭೂಮಿಯ ಜನಪ್ರಿಯ ನಟ ಡಾ.ದೇವದಾಸ್ ಕಾಪಿಕಾಡ್, ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಧ್ವನಿ ನೀಡಿದರೆ, ಅವರ ಮಗ ಹಾಗೂ ಅರ್ಜುನ್ ಕಾಪಿಕಾಡ್, ರಿಷಬ್ ಶೆಟ್ಟಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net