

ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, 300 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮಧ್ಯೆ, ಚಿತ್ರವು ನ.18ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
'ಕಾಂತಾರ' ಚಿತ್ರವು ಸೆ. 30ರಂದು ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾಗಿದ್ದು ಬರೀ ಕನ್ನಡದಲ್ಲಿ. ಕ್ರಮೇಣ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕ ಹಿನ್ನೆಲೆಯಲ್ಲಿ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ, 'ಕಾಂತಾರ' ಇಂದು ಬರೀ ಕನ್ನಡ ಚಿತ್ರವಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಆಗುವ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಎಲ್ಲ ರಾಜ್ಯಗಳಿಗೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದಷ್ಟೇ ಅಲ್ಲ, ಕಲೆಕ್ಷನ್ ಸಹ ಜೋರಾಗಿದೆ.
ಕನ್ನಡ ಅವತರಣಿಕೆಯೊಂದೇ ಕಳೆದ ಒಂದು ತಿಂಗಳಲ್ಲಿ 120 ಪ್ಲಸ್ ಕೋಟಿ ರೂ.ಗಳನ್ನು ಬಾಚಿಕೊಂಡರೆ, ಹಿಂದಿ ಮತ್ತು ತೆಲುಗು ಅವತರಣಿಕೆಯು 60 ಕೋಟಿ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಬರೀ ಭಾರತವಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೀಗಿರುವಾಗಲೇ, 'ಕಾಂತಾರ' ಚಿತರವು ನ.18ಕ್ಕೆ ಅಮೇಜಾನ್ ಪ್ರೈಮ್ನಲ್ಲಿ ಬರಲಿದೆ ಎಂಬ ಸುದ್ದಿ ಇದೆ. ಅಮೇಜಾನ್ ಸಂಸ್ಥೆಯು ಚಿತ್ರದ ಡಿಜಿಟಲ್ ಹಕ್ಕುಗಳನ್ನು ಕೊಂಡುಕೊಂಡಿರುವುದು ನಿಜ. ಆದರೆ, ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಚೆನ್ನಾಗಿರುವಾಗ ಓಟಿಟಿಯಲ್ಲೂ ಬಿಡುಗಡೆ ಮಾಡಲಾಗುತ್ತದಾ? ಅಥವಾ ಇನ್ನಷ್ಟು ದಿನ ತಡೆದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆದರೆ, ಸದ್ಯಕ್ಕಂತೂ ಅಮೇಜಾನ್ ಪ್ರೈಮ್ನವರಾಗಲೀ, ಚಿತ್ರತಂಡದವರಾಗಲೀ ನ.18ರದು ಚಿತ್ರ ಬಿಡುಗಡೆಯಾಗುತ್ತದೆ ಎಂದು ಎಲ್ಲೂ ಘೋಷಿಸಿಲ್ಲ. ಇನ್ನೂ ತಡವಾಗಿ ಘೋಷಿಸಲಾಗುತ್ತದೋ ಅಥವಾ ಇದು ಬರೀ ಊಹಾಪೋಹವೋ ಎಂಬ ವಿಷಯ ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ: ಹಾಲಿವುಡ್ ಸಾಹಸ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಸಮಂತಾ!
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.