ಗಳಿಕೆಯಲ್ಲಿ 'ಕೆಜಿಎಫ್​ 2' ಚಿತ್ರವನ್ನೂ ಹಿಂದಿಕ್ಕಿ ಹೊಸ ದಾಖಲೆ ಬರೆದ 'ಕಾಂತಾರ'

Kantara - KGF 2
Published on

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಚಿತ್ರವು ಒಟ್ಟಾರೆ ಜಗತ್ತಿನಾದ್ಯಂತ 400 ಕೋಟಿ ರೂ ಸಂಗ್ರಹಿಸಿದೆ ಎಂಬ ಸುದ್ದಿ ಇದೆ. ಹೊಸ ವಿಷಯವೇನೆಂದರೆ, ಈ ಚಿತ್ರವು 'ಕೆಜಿಎಫ್​ 2' ಚಿತ್ರವನ್ನೂ ಗಳಿಕೆಯಲ್ಲಿ ಹಿಂದಿಕ್ಕಿ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರವಾಗಿತ್ತು. ಈ ವರ್ಷದ ಏಪ್ರಿಲ್​ 14ರಂದು ಬಿಡುಗಡೆಯಾದ ಚಿತ್ರದ ಕನ್ನಡದ ಅವತರಣಿಕೆಯು ಒಟ್ಟಾರೆ 165 ಕೋಟಿ ರೂ. ಸಂಗ್ರಹಿಸಿತ್ತು ಎಂದು ಹೇಳಲಾಗಿತ್ತು. ಈಗ 'ಕಾಂತಾರ' ಚಿತ್ರವು 168 ಕೋಟಿ ರೂ. ಸಂಗ್ರಹಿಸುವ ಮೂಲಕ 'ಕೆಜಿಎಫ್​ 2' ಚಿತ್ರದ ದಾಖಲೆಯನ್ನು ಪುಡಿಪುಡಿ ಮಾಡಿದೆ. ವಿಶೇಷವೆಂದರೆ, ಎರಡೂ ಚಿತ್ರಗಳನ್ನು ನಿರ್ಮಿಸಿದ್ದು, ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು. ಒಂದು ಸಂಸ್ಥೆಯ ಚಿತ್ರ ಸ್ಥಾಪಿಸಿದ ದಾಖಲೆಯನ್ನು, ಅದೇ ಸಂಸ್ಥೆಯ ಇನ್ನೊಂದು ಚಿತ್ರ ಅದೇ ವರ್ಷ ಮುರಿದಿರುವುದು ಹೆಗ್ಗಳಿಕೆ.

'ಕಾಂತಾರ' ಚಿತ್ರವು ಜಗತ್ತಿನಾದ್ಯಂತ 400 ಕೋಟಿ ರೂ. ಗಳಿಕೆ ಮಾಡಿದ್ದು, ಈ ಪೈಕಿ ಕರ್ನಾಟಕದಿಂದಲೇ 168.5 ಕೋಟಿ ಸಂಗ್ರಹಿಸಿದೆಯಂತೆ. ಕೇರಳದಿಂದ 19.2 ಕೋಟಿ, ಹಿಂದಿಯಿಂದ 90 ಕೋಟಿ, ತೆಲುಗಿನಿಂದ 60 ಕೋಟಿ ಹಾಗೂ ತಮಿಳಿನಿಂದ 12.70 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಅಲ್ಲಿಂದಲೇ 44 ಕೋಟಿ ರೂ. ಗಳಿಕೆಯಾಗಿದೆ ಎಂಬ ಸುದ್ದಿ ಇದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net