

ಬೆಂಗಳೂರು: ಕಮರೊಟ್ಟು ಚೆಕ್‌ಪೋಸ್ಟ್‌ನ ಹುಡುಗ ಮತ್ತು ಮೊಟ್ಟೆಯ ಹುಡುಗಿ ಇತ್ತೀಚೆಗೆ ದೂರದ ಉತ್ತರಪ್ರದೇಶದಲ್ಲಿ ನಡೆದ ಮುಹೂರ್ತಕ್ಕೆ ಜೊತೆಯಾಗಿದ್ದಾರೆ. ಅಂದಹಾಗೆ ಇದಕ್ಕೆಲ್ಲ ಕಾರಣ 'ಭೈರವ'.
ಅಂದರೆ 'ಭೈರವ' ಎಂಬ ಹೊಸ ಕನ್ನಡ ಸಿನಿಮಾದ ಮುಹೂರ್ತ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಗೋವಿಂದಪುರದ ಹನುಮಂತನ ಸನ್ನಿಧಿಯಲ್ಲಿ ಈ ಮುಹೂರ್ತ ನಡೆದಿದ್ದು, ಆ ಪ್ರದೇಶದ ಬಿಜೆಪಿ ಮುಖಂಡರಾದ ಡಾ. ಮಂಜು ಶಿವಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿಶೇಷವೆಂದರೆ ಈ ಚಿತ್ರದ ಶೀರ್ಷಿಕೆ ಅನಾವರಣ ಮುಂಬೈನಲ್ಲಿ ನಡೆದಿತ್ತು, ಇದೀಗ ಮುಹೂರ್ತ ಉತ್ತರಪ್ರದೇಶದಲ್ಲಿ ನೆರವೇರಿದೆ.
ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ ಆರಂಭ ಫಲಕ ತೋರಿದರು. ವಿಸಿಕಾ ಫಿಲಂ ಸಂಸ್ಥೆಯ ವೈಭವ್ ಬಜಾಜ್ ಹಾಗೂ ಹನಿ ಚೌಧರಿ ಕ್ಯಾಮೆರಾ ಚಾಲನೆ ಮಾಡಿದರು. ಅಲ್ಲದೆ ಚಿತ್ರತಂಡದ ಸದಸ್ಯ, ಮೀರತ್ನ ಖ್ಯಾತ ವಕೀಲ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಿನಿಮಾದಲ್ಲಿ 'ಕಮರೊಟ್ಟು ಚೆಕ್‌ಪೋಸ್ಟ್' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಸನತ್ ನಾಯಕನಾಗಿ ಹಾಗೂ 'ಒಂದು ಮೊಟ್ಟೆಯ ಕಥೆ' ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಶೈಲಶ್ರೀ ಮುಲ್ಕಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.
ಖಳನಾಯಕನಾಗಿ ಉಮೇಶ ಸಕ್ಕರೆನಾಡು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ಫ್ರೆಡ್ರಿಕ್ ಅವರ ಛಾಯಾಗ್ರಹಣ, ಕಪಿಲ್ ದೀಕ್ಷಿತ್ ಅವರ ಕ್ರಿಯೇಟಿವ್ ಡೈರೆಕ್ಷನ್ ಮತ್ತು ಕರಣ್ ಕ್ಷಿತಿ ಸುವರ್ಣ ಅವರ ಸಹನಿರ್ದೇಶನವಿದೆ.