ಅಗ್ರಸೇನಾ ಆ್ಯಕ್ಷನ್ ಟೀಸರ್: ಮಾತು ಮಾತಲ್ಲಿ ಭಾವುಕರಾದ ನಾಯಕ, ನಾಯಕಿ

agrasena
Published on

ಬೆಂಗಳೂರು: ಈ ಹಿಂದೆ ‘ಭಜರಂಗಿ’ ಹರ್ಷ ಜತೆ ಕೆಲಸ ಮಾಡಿ ಅನುಭವ ಪಡೆದಿರುವ ಮುರುಗೇಶ್ ಕಣ್ಣಪ್ಪ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಅಗ್ರಸೇನಾ’. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಮತ್ತು ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡಲಾಯಿತು. ಅಮರ್ ವಿರಾಜ್, ಅಗಸ್ತ್ಯ ಬೆಳಗೆರೆ ಚಿತ್ರದ ನಾಯಕರು. ಅವರಿಗೆ ರಚನಾ ದಶರಥ್, ಭಾರತಿ ಹೆಗಡೆ ನಾಯಕಿಯರು. ‘ಅಗ್ರಸೇನಾ’ ಹಿರಿಯ ನಟ ರಾಮಕೃಷ್ಣರ 200ನೇ ಸಿನಿಮಾ ಆಗಿದ್ದು, ಇಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ.

ನಿರ್ದೇಶಕ ಮುರುಗೇಶ್, ‘ಇದೊಂದು ಫ್ಯಾಮಿಲಿ ಡ್ರಾಮಾ. ನಾಯಕನನ್ನು ಪರಿಚಯಿಸುವ ಹಾಡನ್ನು ಶಿವಣ್ಣ ರಿಲೀಸ್ ಮಾಡಿದ್ದರು. ಇದೀಗ ಆ್ಯಕ್ಷನ್ ಟೀಸರ್ ರಿಲೀಸ್ ಆಗಿದೆ. ತಂದೆ - ಮಗನ ಸಂಬಂಧದ ಕಥೆ ಒಂದೆಡೆ, ಲವ್‌ಸ್ಟೋರಿ ಮತ್ತೊಂದೆಡೆ ಹೀಗೆ ಡಬಲ್ ಟ್ರ್ಯಾಕ್‌ನಲ್ಲಿ ಕಥೆ ಸಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು. ಚಿತ್ರದಲ್ಲಿ ಆರು ಹಾಡುಗಳಿದ್ದು, ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ಹೈದರಾಬಾದ್, ಕೊಚ್ಚಿನ್‌ನಲ್ಲೂ ಸಂಗೀತ ಸಂಯೋಜನೆಯ ಕೆಲಸ ಮಾಡಿರುವುದಾಗಿ ಸಂಗೀತ ನಿರ್ದೇಶಕ ತ್ಯಾಗರಾಜ್ ಹೇಳಿಕೊಂಡರು.

ನಾಯಕ ಅಮರ್ ವಿರಾಜ್, ಲವರ್‌ಬಾಯ್ ಪಾತ್ರದಲ್ಲಿ ನಟಿಸಿದ್ದು, ಮತ್ತೊಬ್ಬ ನಾಯಕ ಅಗಸ್ತ್ಯ ಆದಿಶೇಷನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಏಳನೇ ವಯಸ್ಸಿನಲ್ಲಿ ತಂದೆ ಕಳೆದುಕೊಂಡು, ಬಸ್ ಡ್ರೈವರ್ ಅಣ್ಣನ ಆಸರೆಯಲ್ಲಿ ಬೆಳೆದು, ಇಂದು ನಟನಾಗಿದ್ದೇನೆ’ ಎಂದು ಭಾವುಕರಾದರು ಅಗಸ್ತ್ಯ. ಜತೆಗೆ ಮಳೆಯಲ್ಲಿ ಫೈಟ್ ಮಾಡುವಾಗ ಬಿದ್ದು, ಬೆನ್ನಿಗೆ ಪೆಟ್ಟಾಗಿ ಎರಡು ತಿಂಗಳು ಬ್ರೇಕ್ ಪಡೆದ ಅನುಭವ ಹಂಚಿಕೊಂಡರು. ಅಗಸ್ತ್ಯ ಭಾವುಕರಾಗಿದ್ದನ್ನು ನೋಡಿ ನಾಯಕಿ ರಚನಾ ಕಣ್ಣಂಚಲ್ಲೂ ನೀರು ಜಿನುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net