ಹೌದು ಇದು ಮೊಬೈಲ್​ ಚಾರ್ಜರ್ರೇ ಆದ್ರೆ… ಸತ್ಯ ಒಪ್ಕೊಂಡ ಮೈಕಲ್​, ಯಾರಪ್ಪ ಆ ಭಗವಂತ ಅಂದ್ರು ವಿನಯ್!​

BBK Charger 1
Published on

ಬೆಂಗಳೂರು: ಕಳೆದ ಎರಡು ದಿನಗಳಿಂದ ಬಿಗ್​ಬಾಸ್​ ಮನೆಯ ಬಗ್ಗೆ ಒಂದು ವಿಚಾರ ಬಹಳ ಸದ್ದು ಮಾಡಿತು. ಅದೇನೆಂದರೆ, ಬಿಗ್​ಬಾಸ್​ ಮನೆಯ ಒಳಗೆ ಮೊಬೈಲ್​ ಬಳಸುತ್ತಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಮನೆಯ ಪ್ಲಗ್​ ಒಂದರಲ್ಲಿ ಮೊಬೈಲ್​ ಚಾರ್ಜರ್​ ಅಳವಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಸಂಗೀತಾ ಶೃಂಗೇರಿ ಮರೆಯಾಗಿದ್ದರಿಂದ ಚಾರ್ಜರ್​ ಮಾತ್ರ ಗೋಚರವಾಗಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನಟ ಕಿಚ್ಚ ಸುದೀಪ್​ ಕೆಸಿಸಿಯಲ್ಲಿ ಬಿಜಿಯಾಗಿರುವುದರಿಂದ ಇಂದಿನ ವಾರದ ಪಂಚಾಯಿತಿಗಾಗಿ ನಟಿ ಶ್ರುತಿ ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮನೆಯಿಂದ ಹೊರಗಡೆ ನಡೆಯುತ್ತಿರುವ ಚರ್ಚೆಯನ್ನು ಬಿಗ್​ಬಾಸ್​ ಸ್ಪರ್ಧಿಗಳ ಗಮನಕ್ಕೆ ತಂದರು. ಮನೆಯಲ್ಲಿ ಮೊಬೈಲ್​ ಬಳಕೆ ಮಾಡುತ್ತಿದ್ದೀರಿ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಒಂದು ಫೋಟೋ ಎಂದು ಹೇಳುವ ಮೂಲಕ ವೈರಲ್​ ಫೋಟೋವನ್ನು ಬಿಗ್​ಬಾಸ್​ ಮನೆಯ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಯಿತು.

ಇದಾದ ಬಳಿಕ ಬಿಗ್​ಬಾಸ್​ ಮಂದಿ ವೈರಲ್​ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದರು. ಮೊದಲಿಗೆ ವಿನಯ್​ ಗೌಡ ಮಾತನಾಡಿ ಮೊಬೈಲ್​ ಚಾರ್ಜರ್​ ಅಲ್ಲ ಟ್ರಿಮ್ಮರ್​ ಚಾರ್ಜರ್, ನಾನು ಗಡ್ಡ ಶೇವ್​ ಮಾಡಲು ಬಳಸುತ್ತೇನೆ. ಯಾರು ಭಗವಂತ ಈ ರೀತಿ ಮಾಡಿದ್ದು​ ಎನ್ನುತ್ತಾರೆ. ಬಳಿಕ ಮೈಕಲ್​ ಮಾತನಾಡಿ, ಇದು ನನ್ನ ಮೊಬೈಲ್​ ಚಾರ್ಜರ್​ ಹೌದು. ಆದರೆ, ಬ್ರಿಕ್​ ಮಾತ್ರ ಮೊಬೈಲ್​ನದ್ದೂ ಯುಎಸ್​ಬಿ ಮಾತ್ರ ಟ್ರಿಮ್ಮರ್​ನದ್ದು. ನಾವಿಲ್ಲಿ ಮೊಬೈಲ್​ ಬಳಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಜನರಲ್ಲಿದ್ದ ಒಂದು ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ವೈರಲ್​ ಆಗಿತ್ತು ಫೋಟೋ ಬಿಗ್​ಬಾಸ್​ ರಿಯಾಟಿಲಿ ಶೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು. ಒಮ್ಮೆ ದೊಡ್ಮನೆಯೊಳಗೆ ಸೇರಿಕೊಂಡರೆ ಹೊರ ಜಗತ್ತಿಗೂ ಅವರಿಗೂ ಯಾವುದೇ ಕನೆಕ್ಷನ್​ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿರುತ್ತದೆ ಎಂಬುದರ ಅರಿವು ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೋ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಫೋಟೋದಲ್ಲಿ ಕನ್ನಡಿಯ ಪಕ್ಕದ ಪ್ಲಗ್​ನಲ್ಲಿ ಎರಡು ಮೊಬೈಲ್​ ಚಾರ್ಜರ್​ಗಳನ್ನು ಅಳವಡಿಸಲಾಗಿದೆ. ಆದರೆ, ಸಂಗೀತಾ ಮರೆಯಾಗಿರುವುದರಿಂದ ಯಾವುದನ್ನು ಚಾರ್ಜ್​ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಮೊಬೈಲ್​ ಚಾರ್ಜರ್​ ಇರುವುದನ್ನು ವೀಕ್ಷಕರು ಕಂಡುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ತೆಗೆದು ಹಳದಿ ಬಣ್ಣದಲ್ಲಿ ಚಾರ್ಜರ್​ ಇರುವ ಕಡೆ ರೌಂಡ್​ ಮಾರ್ಕ್​ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟು, ಬಿಗ್​ಬಾಸ್​ನಲ್ಲಿ ಮೊಬೈಲ್​ ಬಳಕೆಗೂ ಅವಕಾಶವಿದೆ ಎಂದು ಚರ್ಚಿಸುತ್ತಿದ್ದರು.

BBK 10 Mobile

ಈ ಹಿಂದೆ ಬಿಗ್​ಬಾಸ್​ ಮನೆಯೊಳಗೆ ಸ್ಮೋಕಿಂಗ್​ಗೆ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಸ್ಪರ್ಧಿಗಳು ಸ್ಮೋಕಿಂಗ್​ ಮಾಡುವ ವಿಡಿಯೋ ವೈರಲ್​ ಆದ ಬಳಿ, ದೊಡ್ಮನೆಯೊಳಗೆ ಪ್ರತ್ಯೇಕವಾಗಿ ಸ್ಮೋಕಿಂಗ್​ ಜೋನ್​ ಕೂಡ ಇದೆ ಎಂಬುದು ಬಯಲಾಗಿತ್ತು. ಬಳಿಕ ಮೊಬೈಲ್​ ಚಾರ್ಜರ್​ ಇರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ, ಇದಕ್ಕೆಲ್ಲ ಇದೀಗ ಉತ್ತರ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net