

ಬಿಗ್ಬಾಸ್ನಲ್ಲಿ ಮಿಂಚಿ, "ಲಂಡನ್ನಲ್ಲಿ ಲಂಬೋದರ', "ಕಡಲ ತೀರದ ಭಾರ್ಗವ' ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ ಶ್ರುತಿ ಪ್ರಕಾಶ್ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಬಾಲಿವುಡ್ನತ್ತ ಹೆಜ್ಜೆ ಹಾಕಿದ್ದಾರೆ. ವಿಕ್ರಮ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ಶ್ರುತಿ ಪ್ರಕಾಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಸಂತಸ ಹಂಚಿಕೊಳ್ಳುವ ಅವರು, "ನನ್ನ ಸಿನಿಮಾ ಪಯಣದ ಅತ್ಯುತ್ತಮ ಮೈಲಿಗಲ್ಲೊಂದನ್ನು ಸಾಧಿಸಿದ್ದೇನೆ. ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದೇನೆ. ವಿಕ್ರಮ್ ಭಟ್ ಮತ್ತು ಮಹೇಶ್ ಭಟ್ ಅವರಂತಹ ದಿಗ್ಗಜರ ಜತೆ ಕೆಲಸ ಮಾಡುವ ಅವಕಾಶ ದೊರೆತಿರುವ ಬಗ್ಗೆ ಖುಷಿಯಿದೆ. ಇಷ್ಟು ವರ್ಷಗಳ ನನ್ನ ಕನಸು, ಹೋರಾಟ, ನಂಬಿಕೆ ಇದೀಗ ನಿಜವಾಗಿದೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, "ಹಾಂಟೆಡ್, ಘೋಸ್ಟ್ಸ್ ಆಫ್ ದಿ ಪಾಸ್ಟ್' ಎಂದು ನಾಮಕರಣ ಮಾಡಲಾಗಿದೆ. "ಘುಲಾಮ್', "ರಾಜ್', "ಹಾಂಟೆಡ್', "ಕ್ರಿಯೇಚರ್', "1921', "ಘೋಸ್ಟ್' ಸೇರಿ 30ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿರುವ ವಿಕ್ರಮ್ ಭಟ್, ಬಾಲಿವುಡ್ನಲ್ಲಿ ಹಾರರ್ ಸಿನಿಮಾಗಳಿಗೆ ಹೆಸರುವಾಸಿ. ಕಳೆದ ವರ್ಷ "ಜುದಾ ಹೋಕೆ ಭೀ' ಚಿತ್ರ ನಿರ್ದೇಶಿಸಿದ್ದ ಅವರು ಇದೀಗ "ಹಾಂಟೆಡ್, ಘೋಸ್ಟ್ ಆ್ ದಿ ಪಾಸ್ಟ್' ಮೂಲಕ ಮತ್ತೊಂದು ಹಾರರ್ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ.
-ಏಜೆನ್ಸೀಸ್