ಶರಣ್ ಹೊಸತನದ ಹುಡುಕಾಟ; 100 ಚಿತ್ರಗಳಲ್ಲಿ ಹಾಸ್ಯನಟನಾಗಿ ನಗಿಸುವುದು ಸುಲಭವಲ್ಲ

sharan
Published on

| ಪ್ರಮೋದ ಮೋಹನ ಹೆಗಡೆ

ಹಾಸ್ಯ ಕಲಾವಿದನಾಗಿ ಖ್ಯಾತಿ ಪಡೆದು ನೂರನೇ ಸಿನಿಮಾದಲ್ಲಿ ಹೀರೋ ಆದ ನಟ ಶರಣ್, ಭಿನ್ನ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ‘ಛೂ ಮಂತರ್’ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಗ್ಗೆ, ಹೊಸ ಕಥೆಗಳ ಹುಡುಕಾಟದ ಬಗ್ಗೆ ಶರಣ್ ಮಾತನಾಡಿದ್ದಾರೆ.

ಹೊಸತನ ಇರಬೇಕು
ಇತ್ತೀಚೆಗೆ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಶರಣ್, ‘ಸಿನಿಮಾಗೆ ನನ್ನ ಶಕ್ತಿ ಮೀರಿ ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ಗುಣ. ಅದರ ತೆಗೆ ಪ್ರತಿ ಬಾರಿ ಏನಾದರೊಂದು ಹೊಸತನದ ಪಾತ್ರವನ್ನು ಮಾಡಬೇಕು, ಹೊಸ ರೀತಿಯ ಸಿನಿಮಾದ ಭಾಗವಾಗಬೇಕೆಂಬುದು ನನ್ನಾಸೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೊಸ ಬಗೆಯ ಸಿನಿಮಾ ನೋಡಲು ಬಯಸುತ್ತಾರೆ. ಈವರೆಗೆ ನಾನು ಹುಡುಗಿ, ವಿಲನ್, ಹೀಗೆ ಹಲವು ಪಾತ್ರಗಳನ್ನು ಮಾಡಿದ್ದರೂ, ಎಲ್ಲದರಲ್ಲೂ ನನ್ನದೊಂದು ಸ್ಟೈಲ್ ಇತ್ತು. ಅದರಿಂದ ಹೊರಬಂದು ಹೊಸ ಪ್ರಯತ್ನ ಮಾಡಬೇಕು ಎನ್ನುವಾಸೆ. ಶರಣ್ ಎಂದರೆ ನಗು ಎನ್ನುವವರು ಅನೇಕರಿದ್ದಾರೆ. ಅದರ ಜತೆಗೆ ನನ್ನಿಂದ ಹೊಸತನ್ನು ನಿರೀಕ್ಷೆ ಮಾಡುವವರೂ ಇದ್ದಾರೆ. ಅವರಿಬ್ಬರ ನಡುವೆಯೂ ಇರುವ ಒಂದ ಸಮಾನ ಅಂಶವನ್ನು ಹುಡುಕಿ, ಅದನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೇನೆ. ಹೀಗಾಗಿ ನಾನು ಕೂಡ ಈವರೆಗೆ ನಾನು ಮಾಡಿರದ, ನನ್ನತನ ಕಳೆದುಹೋಗದಂಥ ಕಥೆ ಹುಡುಕುತ್ತಿದ್ದೇನೆ. ಈ ಪ್ರಯತ್ನದಲ್ಲೇ ನನ್ನ ಮೊದಲ ಹೆಜ್ಜೆ ‘ಗುರು ಶಿಷ್ಯರು’ ಸಿನಿಮಾ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ‘ಗುರು ಶಿಷ್ಯರು ವಿಭಿನ್ನ ಪ್ರಯತ್ನ ಎನ್ನಬಹುದು’ ಎನ್ನುತ್ತಾರೆ.

ಬರವಣಿಗೆಯ ತಂಡ!
ಸ್ವಂತದ್ದೊಂದು ಬರವಣಿಗೆಯ ತಂಡದ ಇಟ್ಟುಕೊಳ್ಳುವುದರ ಬಗ್ಗೆ, ‘ನನ್ನದೇ ಆದ ಬರವಣಿಗೆಯ ತಂಡವಿಲ್ಲ. ಆದರೆ, ನನ್ನ ಮೊದಲ ‘ರ‌್ಯಾಂಬೊ’ ಚಿತ್ರದಿಂದ ಹಿಡಿದು ಎಲ್ಲ ಚಿತ್ರಗಳ ಆಯ್ಕೆಯನ್ನು ನಿರ್ದೇಶಕ ತರುಣ್ ಸುಧೀರ್ ಮಾಡುತ್ತಾನೆ. ‘ಗುರು ಶಿಷ್ಯರು’, ‘ಛೂ ಮಂತರ್’ ಎಲ್ಲದಕ್ಕೂ ಅವನೇ ಕಾರಣ’ ಎನ್ನುತ್ತಾರೆ ಶರಣ್.

ಆ್ಯಕ್ಸಿಡಂಟಲ್ ಕಾಮಿಡಿಯನ್?
ಶರಣ್ ಹಾಸ್ಯಕಲಾವಿದರಾಗಿ ಚಿರಪರಿಚಿತ. ಆದರೆ, ಅಚಾನಕ್ಕಾಗಿ ಆ ಪಟ್ಟ ಪಡೆದಿದ್ದಂತೆ. ‘ನಾನು ಮೂಲತಃ ರಂಗಭೂಮಿ ಕಲಾವಿದ. ಅಲ್ಲಿದ್ದಾಗ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿದ್ದೆ. ನಂತರ ಧಾರಾವಾಹಿಗಳಲ್ಲಿ ಬಹುತೇಕ ನೆಗೆಟಿವ್ ಪಾತ್ರಗಳಲ್ಲೇ ನಟಿಸುತ್ತಿದ್ದೆ. ಆದರೆ, ಧಾರಾವಾಹಿಯ ಒಂದೇ ಒಂದು ಸಂಚಿಕೆಯಲ್ಲಿ ಕಾಮಿಡಿ ಪಾತ್ರ ಮಾಡಿದ್ದೆ. ಆ ಒಂದು ಸಂಚಿಕೆಯಲ್ಲಿ ನನ್ನ ನಟನೆ ನೋಡಿ ನಿರ್ದೇಶಕ ಸಿದ್ದಲಿಂಗಯ್ಯ ಕರೆ ಮಾಡಿ ‘ಪ್ರೇಮ ಪ್ರೇಮ ಪ್ರೇಮ’ ಸಿನಿಮಾದಲ್ಲಿ ಹಾಸ್ಯನಟನ ಪಾತ್ರ ಆರ್ ಮಾಡಿದರು. ಅಲ್ಲಿಂದ ಶುರುವಾದ ಪಯಣ ಕಾಮಿಡಿಯನ್ ಆಗಿ ಬ್ರ್ಯಾಂಡ್ ಆಗಿಬಿಟ್ಟೆ. ಅದರ ಬಗ್ಗೆ ಪಶ್ಚಾತ್ತಾಪವಿಲ್ಲ. ಏಕೆಂದರೆ 100 ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಜನರನ್ನು ನಗಿಸುವುದು ಸುಲಭದ ಕೆಲಸವಲ್ಲ. ಜನ ನನ್ನನ್ನು ಮೆಚ್ಚಿಕೊಂಡ ಬಗ್ಗೆ ಸಂತೋಷವಿದೆ’ ಎನ್ನುತ್ತಾರೆ ಶರಣ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net