

ಮುಂಬೈ: 'ತಲೈವಿ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿನ ಕೆಲವು ಚಿತ್ರಗಳನ್ನು ಕಂಗನಾ ರಣಾವತ್ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜಯಲಲಿತಾ ಅವರ ಆಶೀರ್ವಾದದಿಂದ ಚಿತ್ರದ ಎರಡನೆಯ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಹೇಳಿಕೊಂಡಿದ್ದರು.
ಚಿತ್ರೀಕರಣ ಬಹುತೇಕ ಮುಗಿಸಿರುವ ಕಂಗನಾ ಹೆಗಲ ಮೇಲೆ ಇದೀಗ ಒಂದು ಗುರುತರವಾದ ಜವಾಬ್ದಾರಿ ಇದೆ. ಜಯಲಲಿತಾ ಅವರ ಪಾತ್ರವನ್ನು ಈ ಚಿತ್ರದಲ್ಲಿ ಅವರು ಮಾಡುತ್ತಿದ್ದು, ಪಾತ್ರಕ್ಕಾಗಿ ಒಂದಿಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಈಗ ಅದನ್ನು ಇಳಿಸುವುದರ ಜತೆಗೆ ಮೊದಲಿನ ಸೈಜ್ಗೆ ಹೋಗಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ತಲೈವಿ' ಚಿತ್ರಕ್ಕೆ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೆ. ಇದೀಗ ಚಿತ್ರದ ಬಹುತೇಕ ಭಾಗ ಮುಗಿದಿದ್ದು, ಇನ್ನೊಂದಿಷ್ಟು ಭಾಗದ ಚಿತ್ರೀಕರಣ ಇದೆ. ಹಾಗಾಗಿ ಮೊದಲ ತೂಕ, ಆಕೃತಿ ಮತ್ತು ಚುರುಕುತನಕ್ಕೆ ಮತ್ತೆ ಮರಳಬೇಕಾಗಿದೆ. ಹಾಗಾಗಿ ದಿನಾ ಬೇಗ ಎದ್ದು ವಾಕಿಂಗ್, ವಾಕಿಂಗ್ಗೆ ಹೋಗುತ್ತಿದ್ದೇನೆ. ಯಾರೆಲ್ಲಾ ಜತೆಗೆ ಬರುತ್ತೀರಿ' ಎಂದು ಅವರು ಕೇಳಿದ್ದಾರೆ.
ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳ ಮುಂಚೆಯೇ ಮುಗಿಯಬೇಕಿತ್ತು. ಅಷ್ಟೇ ಅಲ್ಲ, ಚಿತ್ರವು ಜೂನ್ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಹ ಹೇಳಿಕೊಂಡಿತ್ತು. ಆದರೆ, ಲಾಕ್ಡೌನ್ನಿಂದ ಚಿತ್ರತಂಡದ ಯೋಜನೆಗಳೆಲ್ಲಾ ತಲೆ ಕೆಳಗಾಗಿ, ಇತ್ತೀಚೆಗಷ್ಟೇ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಚೆನ್ನೈನಲ್ಲಿ ಪ್ರಾರಂಭವಾಗಿತ್ತು. ಲಾಕ್ಡೌನ್ ಸಮಯವನ್ನು ಮನಾಲಿಯಲ್ಲಿ ಕಳೆದಿದ್ದ ಕಂಗನಾ, ಶೂಟಿಂಗ್ಗೆಂದು ಚೆನ್ನೈಗೆ ಬಂದು ತಮ್ಮ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.