

ಬಾಲಿವುಡ್ನಲ್ಲಿ ಗಾಡ್ಫಾದರ್ ನೆರಳಿಲ್ಲದೆ ಬೆಳೆದು, ಸ್ಟಾರ್ ನಟಿಯಾಗಿ ಮೆರೆಯುತ್ತಿರುವ ಕಂಗನಾ ರಣಾವತ್, ನಾಯಕಿ ಪ್ರಧಾನ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ನಿರ್ಮಾಣ, ಸಹ ನಿರ್ದೇಶನ ಸೇರಿ ಹಲವು ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದಾರೆ. ಈಗಲೂ ಅದನ್ನು ಮುಂದುವರಿಸಿದ್ದಾರೆ. ಹೀಗಿರುವಾಗಲೇ ಈಗ ಇಲ್ಲಿಯವರೆಗೂ ಮಾಡದ ಸಾಹಸಕ್ಕೆ ಕಂಗನಾ ಕೈ ಹಾಕುತ್ತಿದ್ದಾರೆ. ಅದುವೇ ಸಿನಿಮಾ ನಿರ್ದೇಶನ!
‘ಮಣಿಕರ್ಣಿಕಾ; ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದರ ಜತೆಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಇದೀಗ ಇಡೀ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊರಲು ತಯಾರಿ ನಡೆಸಿದ್ದಾರೆ. ಹಾಗಾದರೆ, ಯಾವುದಾ ಸಿನಿಮಾ? ‘ಅಪರಾಜಿತ ಅಯೋಧ್ಯೆ’. ಈ ಚಿತ್ರಕ್ಕೆ ನಿರ್ದೇಶನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಕಂಗನಾ.
‘ಬಾಹುಬಲಿ’ ಸಿನಿಮಾ ಖ್ಯಾತಿಯ ಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್, ‘ಅಪರಾಜಿತ ಅಯೋಧ್ಯೆ’ ಚಿತ್ರಕ್ಕೂ ಕಥೆ ಒದಗಿಸಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಹಿನ್ನೆಲೆ ಮತ್ತು ಅದರ ಬಗ್ಗೆ ಸೃಷ್ಟಿಯಾಗಿದ್ದ ವಿವಾದಗಳನ್ನಿಟ್ಟುಕೊಂಡು ಈ ಸಿನಿಮಾ ತಯಾರಾಗಲಿದ್ದು, ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.
‘ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ನಾನು ಹೊತ್ತು, ಬೇರೆಯವರಿಗೆ ನಿರ್ದೇಶನ ಮಾಡುವಂತೆ ನೀಡುವ ಪ್ಲ್ಯಾನ್ ಇತ್ತು. ಆದರೆ, ಸ್ಕ್ರಿಪ್ಟ್ ಆರಂಭದಿಂದಲೂ ನಾನು ತೊಡಗಿಸಿಕೊಂಡಿದ್ದರಿಂದ ನಾನೇ ಯಾಕೆ ನಿರ್ದೇಶನ ಮಾಡಬಾರದು ಅನಿಸಿತು. ಹಾಗಾಗಿ ನಿರ್ದೇಶನದ ಉಸ್ತುವಾರಿ ವಹಿಸಿಕೊಳ್ಳುವ ಆಲೋಚನೆಯಲ್ಲಿದ್ದೇನೆ’ ಎನ್ನುತ್ತಾರೆ ಕಂಗನಾ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಅನುಮತಿ ಇಲ್ಲದ ಕಾರಣ, ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ತಂಡ ನಿರತವಾಗಿದೆ. ಅನುಮತಿ ಸಿಗುತ್ತಿದ್ದಂತೆ, ಚಿತ್ರೀಕರಣ ಸಂಬಂಧಿ ಕೆಲಸಗಳು ಶುರುವಾಗಲಿವೆ. (ಏಜೆನ್ಸೀಸ್)