ಕಂಗನಾ ಸುರಕ್ಷತೆಗಾಗಿ ಮೃತ್ಯುಂಜಯ ಹೋಮ ಮಾಡಿಸಿದ ಅವರ ತಾಯಿ

Kangana Pooja - Final
Published on

ಬಾಲಿವುಡ್​ನಲ್ಲಿ ಸದ್ಯಕ್ಕೆ ಸಖತ್​ ಸುದ್ದಿಯಲ್ಲಿರುವವರೆಂದರೆ ಅದು ಕಂಗನಾ ರಣಾವತ್​. ಬಾಲಿವುಡ್​ ಮಾಫಿಯಾ ಮತ್ತು ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತು ಕಳೆದ ಕೆಲವು ವರ್ಷಗಳಿಂದ ಮಾತಾಡುತ್ತಲೇ ಬಂದಿರುವ ಅವರು, ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಇನ್ನೂ ಜಾಸ್ತಿ ಮಾಡಿದ್ದಾರೆ.

ಅದೇ ಕಾರಣಕ್ಕೆ, ಕಂಗನಾ ಅವರನ್ನು ಕಂಡರೆ ಆಗದ ಸಂಖ್ಯೆ ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಚ್ಚಿದೆ. ಬಾಲಿವುಡ್​ ಮಾಫಿಯಾ ಮತ್ತು ನೆಪೋಟಿಸಂ ವಿರುದ್ಧ ಟೀಕೆ ಮಾಡುತ್ತಿರುವುದರಿಂದ ಹಲವರಿಗೆ ತಮ್ಮ ಬಗ್ಗೆ ಸಿಟ್ಟಿದೆ ಮತ್ತು ತಮ್ಮ ಟ್ವಿಟರ್​ ಖಾತೆ ಯಾವ ಕ್ಷಣ ಬೇಕಾದರೂ ಸಸ್ಪೆಂಡ್​ ಆಗಬಹುದು ಎಂದು ಸ್ವತಃ ಕಂಗನಾ ಅವರೇ ಹೇಳಿಕೊಂಡಿದ್ದಾರೆ.

ಈ ಮಧ್ಯೆ, ಕಂಗನಾ ಅವರ ಮನಾಲಿ ಮನೆಯ ಸುತ್ತ ಗನ್​ಶಾಟ್​ ಕೇಳಿ ಬಂದಿತ್ತು ಎಂದು ಕಳೆದ ವಾರವಷ್ಟೇ ವರದಿಯಾಗಿತ್ತು. ಇದರಿಂದ ಕಂಗನಾ ಕುಟುಂಬದವರು ಸಾಕಷ್ಟು ಭಯಭೀತರಾಗಿದ್ದಾರೆ. ಇದೇ ಕಾರಣಕ್ಕೆ, ಕಂಗನಾ ಅವರ ತಾಯಿ 'ಮಹಾಮೃತ್ಯುಂಜಯ ಹೋಮ'ವನ್ನು ಭಾನುವಾರ ಆಯೋಜಿಸಿದ್ದರು.

ಈ ಕುರಿತು ಟೀಮ್​ ಕಂಗನಾ ಖಾತೆಯ ಮೂಲಕ ಟ್ವೀಟ್​ ಮಾಡಿರುವ ಕಂಗನಾ, 'ನನ್ನ ಸುರಕ್ಷತೆಯ ಬಗ್ಗೆ ಅಮ್ಮ ಬಹಳ ತಲೆ ಕೆಡಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಮನೆಯಲ್ಲಿ ಹೋಮ ಆಯೋಜಿಸಿದ್ದರು. ಒಂದು ಲಕ್ಷದ 15 ಸಾವಿರ ಬಾರಿ ಮಹಾಮೃತ್ಯುಂಜಯ ಮಂತ್ರ ಪಠಣವಾಯಿತು' ಎಂದು ಅವರು ಹೇಳಿಕೊಂಡಿದ್ದಾರೆ.

ಜತೆಗೆ ಈ ಹೋಮದಲ್ಲಿ ಭಾಗವಹಿಸಿರುವ ಒಂದು ವಿಡಿಯೋವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಂಗನಾ ಜತೆಗೆ ಅವರ ತಾಯಿ ಮತ್ತು ಅಕ್ಕನ ಮಗ ಇರುವುದನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net