

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ನೆಪೋಟಿಸಂ (ಸ್ವಜನಪಕ್ಷಪಾತ) ಮತ್ತು ಬಾಲಿವುಡ್ ಮಾಫಿಯಾ ಬಗ್ಗೆ ನಿರಂತರವಾಗಿ ಮಾತನಾಡಿಕೊಂಡು ಬಂದವರು ನಟಿ ಕಂಗನಾ ರಣಾವತ್. ಆದರೆ, ಇದೀಗ ಈ ಪ್ರಕರಣ ಬೇರೆಯದೇ ತಿರುವು ಪಡೆಯುತ್ತಿದೆ. ಸುಶಾಂತ್ಗೆ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಕೊಡುತ್ತಿದ್ದರು ಎಂಬ ಹೊಸ ಆಂಗಲ್ ಈ ಪ್ರಕರಣಕ್ಕೆ ಸಿಕ್ಕಿದೆ.
ಈ ವಿಷಯವಾಗಿ ಮಾತನಾಡಿರುವ ಅವರು, ಬಾಲಿವುಡ್ನ ಕೆಲವು ರಹಸ್ಯಗಳು ಸುಶಾಂತ್ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸುಶಾಂತ್ ಸಿಂಗ್ ರಜಫುತ್ ಅವರನ್ನು ಕೊಲ್ಲಲಾಗಿದೆ. ಕಾರಣ, ಅವರಿಗೆ ಬಾಲಿವುಡ್ನ ಕೆಲವು ರಹಸ್ಯಗಳು ಗೊತ್ತಿದ್ದವು. ಅದನ್ನು ಅವರೆಲ್ಲೂ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಈ ವಿಷಯದಲ್ಲಿ ಸಹಾಯ ಮಾಡುವುದಕ್ಕೆ ನನಗೆ ಆಸೆ ಇದೆ. ಆದರೆ, ಅದಕ್ಕೂ ಮುನ್ನ, ನನಗೆ ಕೇಂದ್ರ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು' ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಇನ್ನು ಅಮೇರಿಕಾದಲ್ಲಿ ನೆಲೆಸಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಹ ಕಂಗನಾ ಅವರ ಈ ವಾದಕ್ಕೆ ಸಪೋರ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ನಾಕೋರ್ಟಿಕ್ಸ್ ಬ್ಯೂರೋಗೆ ಕಂಗನಾ ಸಹಕಾರ ಕೊಡುವುದಾಗಿ ಹೇಳಿರುವ ನಿಟ್ಟಿನಲ್ಲಿ, ಅವರಿಗೆ ಸೂಕ್ತ ಭದ್ರತೆ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ ಶ್ವೇತಾ.