'ರತ್ನನ್​ ಪ್ರಪಂಚ' ಚಿತ್ರಕ್ಕೆ ಹೀರೋಯಿನ್​ ಆಯ್ಕೆ ... ಕನ್ನಡಕ್ಕೆ ಬಂದ ರೆಬಾ

Ratnan Prapancha - Final
Published on

ಧನಂಜಯ್​ ಅಭಿನಯದ 'ರತ್ನನ್​ ಪ್ರಪಂಚ' ಚಿತ್ರವು ವರಮಹಾಲಕ್ಷ್ಮೀ ಹಬ್ಬದಂದು ಅಧಿಕೃತವಾಗಿ ಘೋಷಣೆಯಾಗಿದೆ. ಅಷ್ಟೇ ಅಲ್ಲ, ಅದೇ ದಿನ ಪೋಸ್ಟರ್​ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಪ್ರೀಪ್ರೊಡಕ್ಷನ್​ ಕೆಲಸಗಳು ಬರದಿಂದ ಸಾಗಿದ್ದು, ಸೆಪ್ಟೆಂಬರ್​ನಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಚಿತ್ರದ ತಂತ್ರಜ್ಱರ ಆಯ್ಕೆಯಾಗಿದ್ದು, ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ ಇಷ್ಟು ದಿನ ನಿರತವಾಗಿತ್ತು. ಇದೀಗ ಕಲಾವಿದರ ಆಯ್ಕೆಯಾಗಿದ್ದು, ಪ್ರಮುಖವಾಗಿ ಮಲಯಾಳಂ ನಟಿ ರೆಬಾ ಮೋನಿಕಾ ಜಾನ್​ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರೆಬಾ, ಕನ್ನಡಕ್ಕೆ ಹೊಸ ಹೆಸರಿರಬಹುದು. ಆದರೆ, ಈಗಾಗಲೇ ಆಕೆ ತಮಿಳು ಮತ್ತು ಮಲಯಾಳಂನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಪ್ರಮುಖವಾಗಿ, ವಿಜಯ್​ ಅಭಿನಯದ 'ಬಿಗಿಲ್​', 'ಮಳೆಯಿಲ್​ ನಾನರಿಗೈನ್​' ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈಗ 'ರತ್ನನ್​ ಪ್ರಪಂಚ' ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಈಗಾಗಲೇ ಚಿತ್ರತಂಡದವರು ಸೋಷಿಯಲ್​ ಮೀಡಿಯಾ ಮೂಲಕ ರೆಬಾಗೆ ಕನ್ನಡ ಚಿತ್ರರಂಗಕ್ಕೆ ವೆಲ್ಕಮ್​ ಆಡಿದ್ದೂ ಆಗಿದೆ.

'ರತ್ನನ್​ ಪ್ರಪಂಚ' ಚಿತ್ರವನ್ನು ರೋಹಿತ್​ ಪದಕಿ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಆಟಗಾರ' ಸೇರಿದಂತೆ ಕೆಲವು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದ ರೋಹಿತ್​, ಆ ನಂತರ 'ದಯವಿಟ್ಟು ಗಮನಿಸಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಈಗ ರೋಹಿತ್​, ತಮ್ಮ ಎರಡನೆಯ ಚಿತ್ರವಾಗಿ 'ರತ್ನನ್​ ಪ್ರಪಂಚ'ವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಇನ್ನು ಈ ಚಿತ್ರವನ್ನು ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​, ಕೆಆರ್​ಜಿ ಸ್ಟುಡಿಯೋಸ್​ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. 'ಕೆಜಿಎಫ್​ 2' ಮತ್ತು 'ಯುವರತ್ನ' ಚಿತ್ರಗಳ ನಿರ್ಮಾಪಕರಾದ ವಿಜಯ್​ ಕಿರಗಂದೂರ್​ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್​ ಲೋಕನಾಥ್​ ಅವರ ಸಂಗೀತ ಮತ್ತು ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net