ನಿಮ್ಮಪ್ಪ ಸಿಎಂ ಆಗಿದ್ದು ಹೇಗೆ ಅಂತ ನಮಗೆ ಗೊತ್ತಿಲ್ವಾ?: ಕಂಗನಾ

Aditya - Kangana - Final
Published on

ಕೆಲವೇ ದಿನಗಳ ಹಿಂದೆ ಸುಶಾಂತ್​ ಸಿಂಗ್ ಆತ್ಮಹತ್ಯೆಯ ಕುರಿತು ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, 'ತಮ್ಮ ಸರ್ಕಾರ ಯಾರ ಪರವಾಗಿಯೂ ಇಲ್ಲ, ಯಾರನ್ನೂ ರಕ್ಷಿಸುತ್ತಲೂ ಇಲ್ಲ, ಸುಶಾಂತ್​ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಸಾಕ್ಷಿ ಇದ್ದರೆ ಕೊಡಿ, ತಪ್ಪಿತಸ್ಥರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಉದ್ಧವ್​ ಠಾಕ್ರೆ ಅವರನ್ನು ಜಗತ್ತಿನ ಬೆಸ್ಟ್​ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಕಂಗನಾ ಟಾಂಗ್​ ನೀಡಿದ್ದರು.

ಈಗ ಕಂಗನಾ ದೃಷ್ಟಿ ಉದ್ಧವ್​ ಅವರ ಮಗ ಆದಿತ್ಯ ಮೇಲೆ ಬಿದ್ದಿದೆ. ಇತ್ತೀಚೆಗೆ ಸುಶಾಂತ್​ ಪ್ರಕರಣದ ಬಗ್ಗೆ ಮಾತನಾಡಿದ್ದ ಆದಿತ್ಯ, ಆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಪ್ರತಿಪಕ್ಷದವರ ಆರೋಪಗಳಿಗೆ ಪ್ರತಿಕ್ರಿಯಿಸಿ, ಅದು ಡರ್ಟಿ ಪಾಲಿಟಿಕ್ಸ್​ ಎಂದಿದ್ದರು. ಆ ಬಗ್ಗೆ ಟೀಮ್​ ಕಂಗನಾ ಮುಗಿಬಿದ್ದಿದೆ.

ಈ ವಿಷಯವಾಗಿ ಟ್ವೀಟ್​ ಮಾಡಿರುವ ಕಂಗನಾ ಅವರ ಪ್ರಚಾರ ತಂಡ, 'ಡರ್ಟಿ ಪಾಲಿಟಿಕ್ಸ್​ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ನೋಡಿ. ನಿಮ್ಮಪ್ಪ ಮುಖ್ಯಮಂತ್ರಿ ಹೇಗಾದರು ಅಂತ ಎಲ್ಲರಿಗೂ ಗೊತ್ತಿದೆ. ಆ ವಿಷಯದಲ್ಲಿ ಸುಮ್ಮನಿರುವ ನೀವು, ಸುಶಾಂತ್​ ಸಾವಿನ ಬಗ್ಗೆ ಕೇಳಿದರೆ ಡರ್ಟಿ ಪಾಲಿಟಿಕ್ಸ್​ ಎನ್ನುತ್ತೀರಾ. ಅದೆಲ್ಲಾ ಬಿಟ್ಟಾಕಿ, ಸುಶಾಂತ್​ ಸಾವಿನ ಬಗ್ಗೆ ಉತ್ತರಿಸುವುದಕ್ಕೆ ನಿಮ್ಮಪ್ಪನಿಗೆ ಹೇಳಿ' ಎಂದು ಆದಿತ್ಯಾಗೆ ಏಳು ಪ್ರಶ್ನೆಗಳನ್ನು ಎಸೆದಿದ್ದಾರೆ.

1) ರಿಯಾ ಎಲ್ಲಿ?

2) ಮುಂಬೈ ಪೊಲೀಸರು ಸುಶಾಂತ್​ ಅವರ ಅಸಹಜ ಸಾವಿನ ಬಗ್ಗೆ ಎಫ್​.ಐ.ಆರ್​ ಏಕೆ ದಾಖಲಿಸಿಲಿಲ್ಲ?

3) ಸುಶಾಂತ್​ ಜೀವಕ್ಕೆ ಅಪಾಯ ಇದೆ ಎಂದು ಅವರ ತಂದೆ ಫೆಬ್ರವರಿಯಲ್ಲೇ ಹೇಳಿದ್ದರೂ, ಪೊಲೀಸರು ಮಾತ್ರ ಅದು ಆತ್ಮಹತ್ಯೆ ಅಂತ ಹೇಳಿಕೊಂಡು ಬರುತ್ತಿರುವುದೇಕೆ?

4) ಈ ವಿಚಾರವಾಗಿ ಫಾರೆನ್ಸಿಕ್​ ತಜ್ಱರು ಯಾಕೆ ಮಾಹಿತಿ ನೀಡುತ್ತಿಲ್ಲ?

5) ತನಿಖೆಗೆಂದು ಬಂದ ಬಿಹಾರ ಪೊಲೀಸರನ್ನು ಕ್ವಾಂಟೈನ್​ನಲ್ಲಿ ಕೂರಿಸಿದ್ದು ಯಾಕೆ?

6) ಸಿಬಿಐ ಕಂಡರೆ ಭಯವೇಕೆ? ಅವರಿಗೆ ಯಾಕೆ ಕೇಸ್​ ಒಪ್ಪಿಸುತ್ತಿಲ್ಲ?

7) ರಿಯಾ ಮತ್ತು ಆಕೆಯ ಕುಟುಂಬದವರು ಸುಶಾಂತ್​ ಹಣ ಲೂಟಿ ಮಾಡಿದ್ದೇಕೆ?

ಹೀಗೆ ಏಳು ಪ್ರಶ್ನೆಗಳನ್ನು ಹಾಕಿರುವ ಟೀಮ್​ ಕಂಗನಾ, ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದಿರುವುದರಿಂದ ಮೊದಲು ಇದಕ್ಕೆ ಉತ್ತರಿಸಿ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net