

ಈ ಡಿಸೆಂಬರ್ ಬಂದರೆ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಚಿತ್ರ ಬಿಡುಗಡೆಯಾಗಿ ಒಂದು ವರ್ಷವೇ ಆಗುತ್ತದೆ. ಪ್ರತೀ ವರ್ಷ ಸಲ್ಮಾನ್ ಅಭಿನಯದ ಎರಡು ಚಿತ್ರಗಳಾದರೂ ಬಿಡುಗಡೆಗೆ ಇದ್ದೇ ಇರುತ್ತದೆ. ಆದರೆ, 'ದಬಾಂಗ್ 3' ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದ್ದರೂ ಸಲ್ಮಾನ್ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗಿಲ್ಲ.
ಅದಕ್ಕೆ ಕಾರಣ ಲಾಕ್ಡೌನ್. ಈದ್ ಮಿಲಾದ್ ಸಂದರ್ಭದಲ್ಲಿ ಸಲ್ಮಾನ್ ಅಭಿನಯದ 'ರಾಧೇ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರ ಬಿಡುಗಡೆಯಾಗಬೇಕಿತ್ತು. ಚಿತ್ರದ ಚಿತ್ರೀಕರಣ ಸಹ ಬಹುತೇಕ ಮುಗಿದಿತ್ತು. ಇನ್ನು ಒಂದು ಹಾಡು ಸೇರಿದಂತೆ ಒಂದಿಷ್ಟು ದಿನಗಳ ಚಿತ್ರೀಕರಣ ಮುಗಿದಿದ್ದರೆ, ಕುಂಬಳಕಾಯಿ ಒಡೆಯಬೇಕಿತ್ತಂತೆ.
ಆದರೆ, ಅಷ್ಟರಲ್ಲಿ ಕರೊನಾ ಹಾವಳಿ ಹೆಚ್ಚಾಗಿ ಲಾಕ್ಡೌನ್ ಘೋಷಣೆಯಾಯಿತು. ಮುಗಿಯಬೇಕಿದ್ದ, 'ರಾಧೇ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಬಾಕಿ ಚಿತ್ರೀಕರಣ ನೆನೆಗುದಿಗೆ ಬಿತ್ತು. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಪನ್ವೇಲ್ನ ಫಾರ್ಮ್ ಹೌಸ್ನಲ್ಲೇ ಇದ್ದ ಸಲ್ಮಾನ್, ಆಗಸ್ಟ್ನಲ್ಲಿ ಮತ್ತೆ 'ರಾಧೇ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರಕ್ಕೆ ಬಾಕಿ ಇರುವ ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದರು.
ಹಾಗೆ ಹೇಳಿದ್ದ ಸಲ್ಮಾನ್, ಇದೀಗ ಮನಸ್ಸು ಬದಲಾಯಿಸಿದ್ದಾರೆ. ಕರೊನಾ ಹಾವಳಿ ಇನ್ನೂ ಕಡಿಮೆಯಾಗದಿರುವುದರಿಂದ, ಸುಮ್ಮನೆ ರಿಸ್ಕ್ ಬೇಡ ಎಂದು ತೀರ್ಮಾನಿಸಿರುವ ಅವರು ನವೆಂಬರ್ನಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಅಷ್ಟೇ ಅಲ್ಲ, ಚಿತ್ರಕ್ಕೆ ಆ ಹಾಡಿನ ಅವಶ್ಯಕತೆ ಇಲ್ಲದಿರುವ ಕಾರಣ, ಅದನ್ನು ಬಿಟ್ಟು, ಮಿಕ್ಕ ಕೆಲಸಗಳನ್ನು ಮುಗಿಸುವುದಕ್ಕೆ ತೀರ್ಮಾನಿಸಿದರಂತೆ.
ಅದರಂತೆ ನವೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, 2021ರ ರಿಪಬ್ಲಿಕ್ ಡೇ ಅಂಗವಾಗಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಅವರು ಯೋಚಿಸುತ್ತಿದ್ದಾರೆ. ಒಂದು ಪಕ್ಷ, ಅಂದುಕೊಂಡಿದ್ದರಲ್ಲಿ ಏರುಪೇರಾದರೆ, ಮುಂದಿನ ಈದ್ಗೆ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಸದ್ಯದ ತೀರ್ಮಾನವಾಗಿದೆ.
'ರಾಧೇ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದಲ್ಲಿ ಸಲ್ಮಾನ್ ಜತೆಗೆ ದಿಶಾ ಪಠಾಣಿ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸುತ್ತಿದ್ದು, ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ.